

ಮುಳಬಾಗಿಲು: ನಗರದ ಲಾಡ್ಜ್ವೊಂದರಲ್ಲಿ ಮಹಿಳೆಯೊಂದಿಗೆ ತಂಗಿದ್ದ ಆಂಧ್ರಪ್ರದೇಶದ ಪಲಮನೇರು ತಾಲೂಕಿನ ಗಂಟಾವರಂ ನಿವಾಸಿ ಶಿವಾರೆಡ್ಡಿ (32) ಎಂಬಾತ ಶನಿವಾರ ಸಂಜೆ ಮೃತಪಟ್ಟಿದ್ದಾನೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಮಹಿಳೆ ಜತೆ ಶಿವಾರೆಡ್ಡಿ ಲಾಡ್ಜ್ಗೆ ಬಂದಿದ್ದು, ಸಂಜೆ 6 ಗಂಟೆ ವೇಳೆಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ವೇಳೆ ಜತೆಯಲ್ಲಿದ್ದ ಮಹಿಳೆ ಶಿವಾರೆಡ್ಡಿಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ.
ಶಿವಾರೆಡ್ಡಿ ಕೋಳಿ ಫಾಮ್ರ್ ಸಂಬಂಧಿಸಿದ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಪಲಮನೇರು ಮೂಲದ ಮಹಿಳೆ ಜತೆ ಪ್ರೇಮಾಂಕರವಾಗಿತ್ತು ಎನ್ನಲಾಗಿದೆ. ಆದರೆ, ಇತ್ತೀಚೆಗೆ ಶಿವಾರೆಡ್ಡಿಗೆ ವಿವಾಹವಾಗಿದ್ದು, ಇದೇ ವಿಚಾರಕ್ಕೆ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಶಿವಾರೆಡ್ಡಿ ತಾಯಿ ಮುಳಬಾಗಿಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.