ಇಬ್ಬರು ಯುವಕರಿಗೆ ಚೂರಿ ಇರಿತ

Stab
Published on

ಉಳ್ಳಾಲ: ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವಕರಿಬ್ಬರಿಗೆ ಪಲ್ಸರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕುತ್ತಾರುಪದವು ಬಳಿಯ ಅಡು ಎಂಬಲ್ಲಿ ಶುಕ್ರವಾರ ರಾತ್ರಿ ಇರಿದು ಪರಾರಿಯಾಗಿದ್ದಾರೆ.

ಸೇವಂತಿಗುಡ್ಡೆಯ ಆದಿತ್ಯ(23), ಪಂಡಿತ್ ಹೌಸ್ ಶಿವಾಜಿನಗರದ ಪವನ್(22) ಇರಿತಕ್ಕೊಳಗಾದವರು. ಗಾಯಾಳು ಆದಿತ್ಯರ ತಮ್ಮ ಅನೀಶ್ ಶುಕ್ರವಾರ ರಾಣಿಪುರಕ್ಕೆ ಕ್ಯಾಟರಿಂಗ್ ಕೆಲಸಕ್ಕೆ ತೆರಳಿದ್ದ. ಕೆಲಸ ಮುಗಿಯುವಾಗ ರಾತ್ರಿಯಾಗಿದ್ದರಿಂದ ಕರೆತರಲೆಂದು ಸ್ನೇಹಿತ ಪವನ್ ಜತೆ ಆದಿತ್ಯ ಸ್ಕೂಟರ್‌ನಲ್ಲಿ ರಾಣಿಪುರಕ್ಕೆ ತೆರಳಿದ್ದಾರೆ. ಹಿಂದಿರುಗುವ ಸಂದರ್ಭ ಅಡು ಎಂಬಲ್ಲಿ ಪಲ್ಸರ್ ಬೈಕ್ ಹಿಂದಿನಿಂದ ಬಂದ ಇಬ್ಬರು ಇರಿದು ರಾಣಿಪುರದತ್ತ ಪರಾರಿಯಾಗಿದ್ದಾರೆ. ಆದಿತ್ಯರ ಬೆನ್ನು, ಪವನ್ ಅವರ ತೋಳಿಗೆ ಗಾಯವಾಗಿದೆ. ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ಎರಡು ವರ್ಷಗಳ ಹಿಂದೆ ಉಳ್ಳಾಲ ಪ್ರದೇಶದಲ್ಲಿ ಕಪ್ಪು ಪಲ್ಸರ್‌ನಲ್ಲಿ ಬರುತ್ತಿದ್ದ ದುಷ್ಕರ್ಮಿಗಳು ವಿವಿಧೆಡೆ ಚೂರಿಯಲ್ಲಿ ಇರಿದು ಪರಾರಿಯಾಗಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಈಗ ಮತ್ತೆ ಹಿಂದಿನ ಮಾದರಿಯಲ್ಲೇ ದುಷ್ಕೃತ್ಯ ಆರಂಭಗೊಂಡಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net