ದಂಪತಿ ಮೇಲೆ ಹಲ್ಲೆ, ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆ

guroji rao
Published on

ಶಿವಮೊಗ್ಗ: ಭದ್ರಾವತಿ ತಾಲೂಕಿನ ಉಜ್ಜನಿಪುರ ಗ್ರಾಮದ ಪರಿಶಿಷ್ಟ ಜಾತಿಯ 33 ವರ್ಷದ ಮಹಿಳೆ ಮತ್ತು ಆಕೆಯ ಪತಿ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 61 ಸಾವಿರ ರೂ. ದಂಡ ವಿಧಿಸಿದೆ.

ಭದ್ರಾವತಿ ಉಜ್ಜನಿಪುರ ತೋಟದ ಮನೆ ನಿವಾಸಿ ಗುರೋಜಿ ರಾವ್(48) ಶಿಕ್ಷೆಗೆ ಒಳಗಾದವರು. 33 ವರ್ಷದ ಮಹಿಳೆಯು ಅನ್ಯ ಜಾತಿಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದು, 2020ರ ಫೆ.6ರಂದು ಗುರೋಜಿ ರಾವ್ ಮತ್ತು ಆಶಾ ಎಂಬುವರು ದಂಪತಿ ಜತೆ ಜಗಳ ತೆಗೆದಿದ್ದರು. ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೈ ಮತ್ತು ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದರು. ಮಹಿಳೆ ಪತಿಯ ಹಣೆಗೆ ಮರದ ರಿಪೀಸ್‌ನಿಂದ ಹಲ್ಲೆ ಮಾಡಿದ್ದರು. ಈ ಬಗ್ಗೆ ದಂಪತಿ ಭದ್ರಾವತಿ ಕಾಗದ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಆಗಿನ ತನಿಖಾಧಿಕಾರಿಯಾಗಿದ್ದ ಡಿವೈಎಸ್‌ಪಿ ಸುಧಾಕರ್ ನಾಯ್ಕ್ ಅವರು ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್, ಆರೋಪ ಸಾಬೀತಾಗಿದ್ದರಿಂದ ಗುರೋಜಿ ರಾವ್‌ಗೆ 4 ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿ ತಪ್ಪಿದ್ದಲ್ಲಿ 2 ತಿಂಗಳು ಸಾದಾ ಸೆರೆವಾಸ, ಎಸ್‌ಸಿ ಮತ್ತು ಎಸ್‌ಟಿ ಪಿಎ ಕಾಯ್ದೆಗೆ 2 ವರ್ಷ ಕಠಿಣ ಸೆರೆವಾಸ ಮತ್ತು 10 ಸಾವಿರ ರೂ. ದಂಡ, ತಪ್ಪಿದ್ದಲ್ಲಿ 1 ತಿಂಗಳು ಸಾದಾ ಸೆರೆವಾಸ, ಕಲಂ 504 ಐಪಿಸಿ ಕಾಯ್ದೆಗೆ 10 ಸಾವಿರ ರೂ. ದಂಡ, ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸೆರೆವಾಸ, ಕಲಂ 324 ಐಪಿಸಿ ಕಾಯ್ದೆಗೆ 20 ಸಾವಿರ ರೂ. ದಂಡ, ತಪ್ಪಿದ್ದಲ್ಲಿ 2 ತಿಂಗಳ ಸಾದಾ ಸೆರೆವಾಸ, ಕಲಂ 323 ಐಪಿಸಿ ಕಾಯ್ದೆಗೆ 1 ಸಾವಿರ ರೂ. ದಂಡ, ತಪ್ಪಿದ್ದಲ್ಲಿ 4 ದಿನಗಳ ಸಾದಾ ಸೆರೆವಾಸ ಹಾಗೂ ಆಶಾ (35) ಅವರಿಗೆ ಕಲಂ 323 ಐಪಿಸಿ ಕಾಯ್ದೆಗೆ 1 ಸಾವಿರ ರೂ. ದಂಡ, ತಪ್ಪಿದ್ದಲ್ಲಿ 4 ದಿನ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net