

ಶಿರಸಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ ವ್ಯಕ್ತಿಗೆ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಬನವಾಸಿಯ ದಿನೇಶ ಚೆನ್ನಯ್ಯ ಶಿಕ್ಷೆಗೆ ಒಳಗಾದವ. 2022ರ ಜುಲೈ ತಿಂಗಳಿನಲ್ಲಿ ಬನವಾಸಿಯ ದೊಡ್ಡಕೇರಿಯಲ್ಲಿರುವ ತನ್ನ ಸಂಬಂಧಿ ದೇವರಾಜ ಚೆನ್ನಯ್ಯ ಅವರ ಮನೆಗೆ ಆಗಮಿಸಿದ್ದ. ಈ ವೇಳೆ ದೇವರಾಜ ಚೆನ್ನಯ್ಯ ಅವರ ಮಗಳು ಗೀತಾ ಅವರು ಯೋಗೇಶ ಚೆನ್ನಯ್ಯ ಎಂಬುವರ ಜೊತೆ ಮಾತಾಡಿದ್ದನ್ನು ಕಂಡು ಸಿಟ್ಟಿಗೆದ್ದು ಜಗಳವಾಡಿದ್ದ. ಸಂಜೆ ಯೋಗೇಶ ಅವರನ್ನು ಮಾತನಾಡುವುದಿದೆ ಎಂದು ಕರೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದೊಂದಿಗೆ ಇರಿದಿದ್ದ. ಈ ಕುರಿತಂತೆ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಿರಣ ಕಿಣಿ ಅವರು, ಆರೋಪಿಗೆ 10 ವರ್ಷ ಸಾದಾ ಕಾರಾಗೃಹ ಶಿಕ್ಷೆ, 22 ಸಾವಿರ ರೂ. ದಂಡ ಹಾಗೂ ಹಲ್ಲೆಗೊಳಗಾದ ಯೋಗೀಶ ಅವರಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ರಾಜೇಶ ಮಳಗಿಕರ್ ವಾದ ಮಂಡಿಸಿದ್ದರು