

ಶಿವಮೊಗ್ಗ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಕುಂಭಮೇಳದಿಂದ ಹಿಂದಿರುಗುತ್ತಿದ್ದ ಶಿವಮೊಗ್ಗ ನಗರದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.
ಶಿವಮೊಗ್ಗದ ಬಸವೇಶ್ವರ ನಗರದ ನಿವಾಸಿ, ನಿವೃತ್ತ ವಿಮಾ ಅಧಿಕಾರಿ ಶ್ರೀನಿವಾಸ್ (71) ಮೃತಪಟ್ಟವರು. ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಖಾಸಗಿ ವಾಹನಗಳಲ್ಲಿ ಸುಮಾರು 105 ಜನರು ಪ್ರಯಾಗ್‌ರಾಜ್ ಕುಂಬಮೇಳಕ್ಕೆ ತೆರಳಿದ್ದರು. ಅಲ್ಲಿಂದ ಕಾಶಿ, ಅಯೋಧ್ಯೆ ಮೂಲಕ ಶಿವಮೊಗ್ಗಕ್ಕೆ ಹಿಂದಿರುಗಲಾಗುತ್ತಿತ್ತು.
ವಿಜಯಪುರ ಜಿಲ್ಲೆಯ ಜಳಕಿ ಬಳಿ ಶ್ರೀನಿವಾಸ್ ಅವರು ಹೃದಯಾಘಾತಕ್ಕೆ ತುತ್ತಾಗಿದ್ದರು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ನಂತರ ಅವರನ್ನು ಇಂಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು. ಅಲ್ಲಿಂದ ಆಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರವನ್ನು ಶಿವಮೊಗ್ಗ ನಗರಕ್ಕೆ ತರಲಾಯಿತು.