

ಮುಂಡರಗಿ: ದೇಶಕ್ಕೆ ಬೇಕಾಗಿರುವುದು ಶರಣಧರ್ಮ, ಕಾಯಕ ಧರ್ಮ, ಅಸ್ಪಶ್ಯತೆ ನಿವಾರಣೆಯ ಧರ್ಮ. ಶರಣಧರ್ಮವು ಸರ್ವ ಸಮ್ಮತದ ಶಾಂತಿಯ ತೋಟವಾಗಿದೆ.
ಬಸವಣ್ಣ ಜಗತ್ತಿನಲ್ಲಿ ಹೆಣ್ಣು ಮಕ್ಕಳ ಧಾರ್ಮಿಕ ಸ್ವಾತಂತ್ರೃತೆಯ ಮಹಾಮನೆಯ ಹೆಬ್ಬಾಗಿಲು ತೆರೆದ ಏಕೈಕ ಯುಗಪುರುಷ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನದಲ್ಲಿ ಮಾತನಾಡಿದ ಅವರು, ‘ಮನುಷ್ಯನಿಗೆ ಸಿದ್ಧಾಂತವಿರಬೇಕು. ಅರಿವಿನ ಪ್ರಜ್ಞೆ ಹೊಂದಬೇಕು.
ಶರಣರ ಸಿದ್ಧಾಂತ ವೈಜ್ಞಾನಿಕದಿಂದ ಕೂಡಿದೆ. ದೇಶದ ಸಂಸ್ಕೃತಿ ಮತ್ತು ಸಂಸ್ಕಾರದ ಬೇರು ಎಂದರೆ ಕುಟುಂಬ. ಬಸವಣ್ಣನವರು ಸಮಾನತೆ ಧರ್ಮವನ್ನು ತಂದರು. ಬಸವಣ್ಣನವರು ಅರಿವಿಗೆ ಪ್ರಾಮುಖ್ಯತೆ ತಂದುಕೊಟ್ಟರು’ ಎಂದರು.
ಭಾರತೀಯ ಸಂಸ್ಕೃತಿಯೊಳಗಡೆ ಪಂಥಗಳು ಪ್ರಾರಂಭವಾಯಿತು. ಆಚರಣೆಗಳು ವಿಭಿನ್ನವಾಯಿತು. ಹೀಗಾಗಿ ಭಾರತವನ್ನು ಸಮೂಹವಾಗಿ ಕಟ್ಟುವುದರಲ್ಲಿ ಸೋತಿದೆ. ಭಾರತೀಯರ ಮನಸು ಸ್ಪಷ್ಟೀಕರಣದ ಸಿದ್ಧಾಂತದೊಳಗೆ ಇಲ್ಲ.
ಭಾತರದಲ್ಲಿ ಏಕ ಮುಖವಾದ ಸಮೂಹ ಚಿಂತನೆ, ಸಿದ್ಧಾಂತ, ವಿಚಾರಧಾರೆ ಬೇಕಾಗಿದೆ. ಭಾರತ ದೇಶಕ್ಕೆ ದೊಡ್ಡ ಶಾಪವಿದ್ದರೆ ಅದು ಜಾತಿ ವ್ಯವಸ್ಥೆ. ರಾಷ್ಟ್ರೀಯತೆ ಬೇರೆ, ಧಾರ್ಮಿಕತೆ ಬೇರೆ. ರಾಷ್ಟ್ರೀಯತೆಯಲ್ಲಿನ ವಿಚಾರಧಾರೆ ಒಳಗೊಂಡಾಗ ಒಂದಾಗುತ್ತೇವೆ.
ಧಾರ್ಮಿಕತೆ ವಿಚಾರಧಾರೆಗಳಿಗೆ ಬಂದಾಗ ವಿಭಾಗವಾಗುತ್ತಾರೆ. ಭಿನ್ನವಾಗಿರುವ ಸಮಾಜವನ್ನು ಒಗ್ಗೂಡಿಸುವುದು ಯಾವ ಧರ್ಮದ ಮೇಲೆ ಎನ್ನುವ ಪ್ರಶ್ನೆಯಾಗಿದೆ ಎಂದರು.