

ನೆಲಮಂಗಲ: ದೀಪ ತಾನೂ ಉರಿದು ಬೆಳಕು ನೀಡುವಂತೆ, ಮನುಷ್ಯನಾದವನೂ ಜ್ಞಾನವೆಂಬ ಬೆಳಕಿನಿಂದ ಸಮಾಜವನ್ನು ಬೆಳಗಬೇಕು ಎಂದು ಕಂಚುಗಲ್ ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣದೇವರ ಮಠದಲ್ಲಿ ಕಾರ್ತಿಕ ಮಾಸದ ಅಮವಾಸೆ ಪ್ರಯುಕ್ತ ಸೋಮವಾರ ಸಂಜೆ ಆಯೋಜಿಸಿದ್ದ ಲಕ್ಷ ದೀಪೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ತಿಕ ಮಾಸ ಶಿವಾರಾಧನೆಗೆ ವಿಶಿಷ್ಟ ಮಾಸ. ಅಂತರಂಗದಲ್ಲಿರುವ ಕತ್ತಲನ್ನು ಹೋಗಲಾಡಿಸಿಕೊಂಡು, ಜ್ಞಾನದ ಬೆಳಕನ್ನು ಕಾಣಲು ಈ ಮಾಸ ಸಹಕಾರಿ. ನಾಗರಿಕತೆ ಬೆಳೆದು ವಿಜ್ಞಾನ ತಂತ್ರಜ್ಞಾನದ ಯುಗದಲ್ಲೂ ವಿಶಿಷ್ಟ ದೀಪೋತ್ಸವ ಸಂಸ್ಕೃತಿ ಭಾರತೀಯರಲ್ಲಿ ಮಾತ್ರ ಕಾಣಬಹುದಾಗಿದೆ. ಭಗವಂತ ಜೀವಸಂಕುಲದ ಯಾವ ಪ್ರಾಣಿಯಲ್ಲೂ ಇರದ ಜ್ಞಾನವನ್ನು ಕೊಟ್ಟಿದ್ದು ಮನುಷ್ಯ ಜನ್ಮವನ್ನು ಶ್ರೇಷ್ಠವಾಗಿಸಿದ್ದಾನೆ ಎಂದು ಹೇಳಿದರು.
ಮನುಷ್ಯ ಮನುಷ್ಯನಾಗಿ ಬದುಕಬೇಕಾದಲ್ಲಿ ಜ್ಞಾನವಿರಬೇಕು. ಪ್ರಕೃತಿಯ ಅಂಗವಾಗಿರುವ ಮನುಷ್ಯ ತನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳಬೇಕು. ಜೀವಿತಾವಧಿಯಲ್ಲಿ ಆಸ್ತಿ ಸಂಪಾದನೆ ಗಳಿಕೆ ಮುಖ್ಯವಲ್ಲ, ಶಾಂತಿ ನೆಮ್ಮದಿ ಕಂಡು ಕೊಳ್ಳಬೇಕಿದೆ. ದೇವಾಲಯಗಳ ದರ್ಶನ ಮಾಡಿರಷ್ಟೇ ಸಾಲದು ನಿಸ್ವಾರ್ಥ, ನಿಶ್ಕಲ್ಮಷ ಭಕ್ತಿಭಾವಗಳು ಮುಖ್ಯ ಎಂದು ತಿಳಿಸಿದರು.
ಸಂಸ್ಕೃತಿ, ಸಂಪ್ರಾದಾಯ, ಆಚಾರವಿಚಾರ ಬೆಳೆಸಿಕೊಂಡು ಸುಸಂಸ್ಕೃತ ವ್ಯಕ್ತಿಯಾಗಿ ರೂಪಿಸುವ ಜೀವನ ಶಿಕ್ಷಣದ ಅವಶ್ಯಕತೆ ಇದೆ. ಬಸವಾದಿಶರಣರ ವೈಚಾರಿಕ ಸಂದೇಶಗಳು ಸ್ಫೂರ್ತಿಯಾಗಬೇಕಿದೆ. ನಾಡಿನ ಎಲ್ಲ ಮಠಗಳ ಬೇಟಿ ನೀಡಿ ಗುರುಗಳ ಆಶೀರ್ವಾದ ಪಡೆದುಕೊಳ್ಳಬೇಕು. ಸಮಾಜದ ನಡಿಗೆ ಮಠದ ಕಡೆಗೆ ಆದಾಗ ಜೀವನದುದ್ದಕ್ಕೂ ಮನಃಶಾಂತಿ ಲಭಿಸುತ್ತದೆ ಎಂದು ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪವಾಡ ಶ್ರೀ ಬಸವಣ್ಣ ದೇವರ ಮಠದ 2021ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಗುರುವಣ್ಣ ದೇವರ ಮಠದ ಶ್ರೀ ನಂಜುಂಡ ಸ್ವಾಮೀಜಿ, ಬೇವೂರು ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಸಾನ್ನಿಧ್ಯವಹಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ರಾಜಮ್ಮ, ಮುಖಂಡರಾದ ರುದ್ರೇಶ್, ಮಹೇಶ್ ಮತ್ತಿತರರು ಇದ್ದರು.