

ಮುಂಡರಗಿ: ಹುಟ್ಟು-ಸಾವಿನ ಮಧ್ಯದಲ್ಲಿನ ಬದುಕನ್ನು ಹೇಗೆ ಸಾರ್ಥಕತೆ ಮಾಡಿಕೊಳ್ಳಬೇಕು ಎನ್ನುವುದು ಎಲ್ಲ ದಾರ್ಶನಿಕರ ಚಿಂತನೆಯಾಗಿತ್ತು. ಮನುಷ್ಯ ಸತ್ಯಸಂಕಲ್ಪದೊಂದಿಗೆ ಬದುಕಬೇಕು ಎಂದು ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಜರುಗಿದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ‘ಮನುಷ್ಯ ಸದಾ ಒಳ್ಳೆಯ ಚಿಂತನೆ ಮಾಡಬೇಕು. ಸತ್ಕಾರ್ಯಗಳ ಮೂಲಕ ದೇವರಿಗೂ ಸಂತೋಷವಾಗುವಂತೆ ಜೀವನ ನಡೆಸಬೇಕು. ಅಲ್ಲದೆ, ವ್ಯವಹಾರಿಕ ಸತ್ಯದ ಜತೆಗೆ ವಾಸ್ತವಿಕ ಸತ್ಯ ಅರಿತು ಬಾಳಬೇಕು. ಬದುಕಿನ ಕೊನೆಯಲ್ಲಿ ನಮ್ಮೊಂದಿಗೆ ಪುಣ್ಯದ ಕಾರ್ಯಗಳ ಫಲ ಮಾತ್ರ ಬರುತ್ತದೆ ಎಂದರು.
ಬಳಗಾನೂರ ಶ್ರೀ ಶಿವಶಾಂತವೀರ ಶರಣರು ಮಾತನಾಡಿ, ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಮುಟ್ಟಿಸುವ ಕೆಲಸವಾಗಬೇಕು. ಸುಂದರ ಬದುಕು ಕಟ್ಟಿಕೊಳ್ಳಲು ಮತ್ತು ಸಾರ್ಥಕ ಜೀವನ ಹೊಂದಲು ಧರ್ಮಸಭೆ ಅತ್ಯವಶ್ಯ. ಧರ್ಮ ಕಾರ್ಯದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬನ್ನಿಕೊಪ್ಪ ಶಾಲೆಯ ಹಾಗೂ ನಾಟ್ಯಬಿಂದು ನೃತ್ಯ ಕೇಂದ್ರದ ಮಕ್ಕಳು ಜನಪದ ನೃತ್ಯ ಸಾದರ ಪಡಿಸಿದರು. ಹೂವಿನಶಿಗ್ಲಿ ಶ್ರೀ ಚನ್ನವೀರ ಸ್ವಾಮೀಜಿ ಮಾತನಾಡಿದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಲಿಂಗನಾಯಕನಹಳ್ಳಿ ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ವೀರೇಶ್ವರ ಶಿವಾಚಾರ್ಯರು, ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪವನ ಮೇಟಿ ಇತರರಿದ್ದರು. ಶಿಕ್ಷಕರಾದ ಎಸ್.ಎಸ್. ಇನಾಮತಿ ಹಾಗೂ ಎಸ್.ಆರ್. ರಿತ್ತಿ ಕಾರ್ಯಕ್ರಮ ನಿರೂಪಿಸಿದರು.