ದೀಪಾವಳಿ ದಿನವೇ ಚಿಕ್ಕಲ್‌ನಲ್ಲಿ ವ್ಯಕ್ತಿ ಹತ್ಯೆ

chikkal mallesh
ಚಿಕ್ಕಲ್‌ನ ಮಲ್ಲೇಶ್
Published on

ಶಿವಮೊಗ್ಗ: ದೀಪಾವಳಿ ದಿನವೇ ನಗರದ ಹೊರವಲಯದ ಚಿಕ್ಕಲ್‌ನ ಮೇಲ್ಸೇತುವೆ ಕೆಳಗೆ ವೈಯಕ್ತಿಕ ದ್ವೇಷದಿಂದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಚಿಕ್ಕಲ್‌ನ ಮಲ್ಲೇಶ್ (35) ಕೊಲೆಯಾದ ವ್ಯಕ್ತಿ. ಮಂಗಳವಾರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ಮಲ್ಲೇಶ್‌ನನ್ನು ಮತ್ತೊಂದು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕುತ್ತಿಗೆ ಮತ್ತು ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮಲ್ಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ನಡೆದ ಬಳಿಕ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುತ್ತ ಬ್ಯಾರಿಕೇಡ್ ಅಳವಡಿಸಿ ಆಂಬುಲೆನ್ಸ್ ಮೂಲಕ ಮಲ್ಲೇಶ್ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆ ಶವಗಾರಕ್ಕೆ ರವಾನಿಸಿದರು.
ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದರು. ಕೆಲವರು ಅಪಘಾತ ಸಂಭವಿಸಿರಬಹುದೆಂದು ಶಂಕಿಸಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಮಲ್ಲೇಶ್‌ನನ್ನು ಹತ್ಯೆ ಮಾಡಿ ಬೈಕ್‌ನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಕಾರಣಕ್ಕೆ ಘಟನೆ ಸಂಭವಿಸಿದೆ. ಹುಡುಗಿ ವಿಚಾರಕ್ಕೆ ಕೊಲೆಯಾಗಿರುವ ಶಂಕೆ ಇದೆ. ಹೆಚ್ಚಿನ ತನಿಖೆ ಬಾಕಿ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net