ಟಿಪ್ಪರ್ ಹಾಯ್ದು ವ್ಯಕ್ತಿ ಸಾವು, ಅಪರಾಧಿಗೆ 6 ತಿಂಗಳು ಶಿಕ್ಷೆ

Court
Published on

ವಿಜಯಪುರ: ನಿರ್ಲಕ್ಷೃತನದಿಂದ ವಾಹನ ಚಲಾಯಿಸಿ ಬೈಕ್ ಸವಾರನ ಸಾವಿಗೆ ಕಾರಣನಾದ ಟಿಪ್ಪರ್ ಚಾಲಕನಿಗೆ 6 ತಿಂಗಳು ಶಿಕ್ಷೆ ಹಾಗೂ 4 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ.

ಇಂಡಿ ತಾಲೂಕಿನ ಧೂಳಖೇಡ ಗ್ರಾಮದ ಪರಶುರಾಮ ವಿಠಲ ಪೂಜಾರಿ ಶಿಕ್ಷೆಗೆ ಗುರಿಯಾದ ಚಾಲಕ. 2017 ಏ.16 ರಂದು ರಾತ್ರಿ 9ರ ಸುಮಾರಿಗೆ ಬಿಜ್ಜರಗಿ-ಕನಮಡಿ ಸಮೀಪದ ಪವನ ಚೂಕಿ ಘಟಕದ ಹತ್ತಿರ ಅಪಘಾತ ಸಂಭವಿಸಿತ್ತು. ವಾಹನ ಚಾಲನೆ ಪರವಾನಿಗೆ ಇಲ್ಲದಿದ್ದರೂ ಟಿಪ್ಪರ್ ಚಲಾಯಿಸಿದ ಪರಶುರಾಮ ಎದುರುಗಡೆ ಬಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದನು. ಬೈಕ್ ಸವಾರ ಆನಂದ ಚಂದನಕೇರಿ ತಲೆ ಹಾಗೂ ಕೈ ಕಾಲುಗಳಿಗೆ ಬಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮರಣ ಹೊಂದಿದ್ದನು.

ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಮಾದೇಶ ಎಂ.ವಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಎಲ್. ಹಳ್ಳೂರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net