

ಚನ್ನಪಟ್ಟಣ: ನಗರದ ಕೆಎಚ್ಬಿ ಬಡಾವಣೆಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪ್ರಮುಖ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ.
ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದ ರಮೇಶ್ ಅಲಿಯಾಸ್ ಜಾಕಿ (35) ಯನ್ನು ಸ್ಥಳ ಪರಿಶೀಲನೆಗಾಗಿ ಗುರುವಾರ ಮಧ್ಯರಾತ್ರಿ ಅನ್ನಪೂರ್ಣೆಶ್ವರಿ ಬಡಾವಣೆಗೆ ಸಿಪಿಐ ವಸಂತ್, ಎಸ್ಐ ಪ್ರಕಾಶ್, ಪೇದೆಗಳಾದ ನಾಗರಾಜು, ಶಿವಕುಮಾರ್ ಅವರ ತಂಡ ಕರೆದೊಯ್ಯುತ್ತಿದ್ದಾಗ ಪೇದೆ ನಾಗರಾಜು ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಸಿಪಿಐ ವಸಂತ್ ಗುಂಡು ಹಾರಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಭಾನುವಾರ ಹಾಡಹಗಲೇ ಕೆಎಚ್ಬಿ ಬಡಾವಣೆಯ ಶಿಕ್ಷಣ ಇಲಾಖೆ ಅಧಿಕಾರಿ ಉತ್ತೇಶ್ ಮನೆಗೆ ನುಗ್ಗಿದ್ದ ಡಕಾಯಿತರು ಪತ್ನಿ ಮತ್ತು ಮಗಳ ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಬೆದರಿಸಿ 60 ಗ್ರಾಂ ಚಿನ್ನ, 10 ಸಾವಿರ ರೂ. ನಗದು ದೋಚಿದ್ದರು. ಆರೋಪಿಗಳ ಚಲನವಲನದ ಮೇಲೆ ನಿಗಾ ಇರಿಸಿದ್ದ ಪೊಲೀಸರು, ಹೈದರಾಬಾದ್ ಸಮೀಪ ತಲೆಮರೆಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿ ಆರೋಪಿ ರಮೇಶ್ ಸೇರಿ ಮೂವರನ್ನು ಬಂಧಿಸಿ ಕರೆತಂದಿದ್ದರು.