

ಎನ್.ಆರ್.ಪುರ: ಮಡಬೂರು ಸೇತುವೆ ಸಮೀಪದ ಮುಖ್ಯ ರಸ್ತೆಯಲ್ಲಿ ಕಾರೊಂದು ಗುಂಡಿ ತಪ್ಪಿಸಲು ಹೋಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮಡಬೂರಿನ ಚಂದ್ರಶೇಖರ್ ಆಚಾರ್(56)ಮೃತವ್ಯಕ್ತಿ. ಚಂದ್ರಶೇಖರ್ ಆಚಾರ್ ಸೋಮವಾರ ರಾತ್ರಿ 8.45ರ ವೇಳೆಗೆ ಮಡಬೂರಿನ ತಮ್ಮ ಮನೆಯಿಂದ ಮಡಬೂರು ದೇವಸ್ಥಾನ ಸಮೀಪದ ಅಂಗಡಿ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎನ್.ಆರ್.ಪುರ ಕಡೆಯಿಂದ ಬಂದ ಅಾರೊಂದು ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಚಂದ್ರಶೇಖರ್ ಆಚಾರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಚಂದ್ರಶೇಖರ್ ಆಚಾರ್ ಕೆಳಗೆ ಬಿದ್ದಿದ್ದಾರೆ. ಕಾರು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಚಂದ್ರಶೇಖರ್ ಆಚಾರ್ ಅವರನ್ನು ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯವ ವೇಳೆಗೆ ಮೃತಪಟ್ಟಿದ್ದರು.
ಮಡಬೂರು ಸೇತುವೆ ಸಮೀಪದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಅಪಘಾತವಾದ ಸ್ಥಳದಲ್ಲೇ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ರಸ್ತೆ ಗುಂಡಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಗುಂಡಿತಪ್ಪಿಸಲು ಹೋಗಿ ಕಾರು ಚಂದ್ರಶೇಖರ್ ಆಚಾರ್‌ಗೆ ಡಿಕ್ಕಿ ಹೊಡೆದಿದೆ. ಈಗಾಗಲೇ ಈ ಗುಂಡಿಯಲ್ಲಿ ಅನೇಕ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಸದಸ್ಯ ಪ್ರವೀಣ್, ಸಹಕಾರ ಸಂಘದ ನಿರ್ದೇಶಕ ರಾಜು ಪ್ರಸನ್ನ, ಗ್ರಾಪಂ ಮಾಜಿ ಉಪಾಧ್ಯಕ್ಷ ಸದಾನಂದ, ಸ್ಥಳೀಯ ಮುಖಂಡರಾದ ರವಿ, ರತ್ನಾಕರ, ಪ್ರಭಾಕರ, ರೇವತಿ, ಲಿಂಗಮ್ಮ, ಕವಿತಾ, ಯಶೋದ, ಕಾರ್ತಿಕ್ ಇದ್ದರು.