ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಪುರುಷ ಸಾವು

14 SARAG 2 ಗಿರೀಶ್
Published on

ಸರಗೂರು: ತಾಲೂಕಿನ ಚಾಮೇಗೌಡನಹುಂಡಿ ಬಳಿ ಕಬಿನಿ ಬಲದಂಡೆ ನಾಲೆಯಲ್ಲಿ ದನಗಳಿಗೆ ನೀರು ಕುಡಿಸಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ತಾಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯನಗರ ಗ್ರಾಮದ ಶಿವಲಿಂಗಯ್ಯ ಅವರ ಪುತ್ರ ಗಿರೀಶ್(37) ಮೃತ. ಗುರುವಾರ ಜಮೀನಿನಲ್ಲಿ ಉಳುಮೆ ಮಾಡಿ ದನಗಳಿಗೆ ನೀರು ಕುಡಿಸಲು ಹೋಗಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗಿರೀಶ್ ಮನೆಗೆ ಹಿಂದಿರುಗಿ ಬಾರದೆ ಹಿನ್ನೆಲೆಯಲ್ಲಿ ಕುಟುಂಬದವರು ಗಾಬರಿಗೊಂಡು ಎಲ್ಲೆಡೆ ವಿಚಾರಿಸಿದ್ದಾರೆ. ಬಳಿಕ ನೀರಿನಲ್ಲಿ ಕೊಚ್ಚಿ ಹೋಗಿರುವುದು ತಿಳಿದುಬಂತು.

ಇಟ್ನ ಗ್ರಾಮದ ಈಜುಗಾರರು ನೀರಿನಲ್ಲಿ ಶೋಧ ನಡೆಸಿದಾಗ ಶನಿವಾರ ಮೃತದೇಹ ಪತ್ತೆಯಾಗಿದೆ. ಶವವನ್ನು ಹೊರತೆಗೆದು ಸರಗೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net