

ಎಚ್.ಡಿ.ಕೋಟೆ: ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪಟ್ಟಣದಲ್ಲಿ ಶನಿವಾರ ಬಂಧಿಸಲಾಗಿದೆ.
ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿ ಮುಂಭಾಗದ ಟೀ ಅಂಗಡಿ ಹತ್ತಿರ ಅಕ್ರಮವಾಗಿ ಚಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಪಟ್ಟಣದ ವಿದ್ಯಾನಗರದ ನಿವಾಸಿ ಎಂ.ಕುಮಾರ್ (36) ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಎಸ್‌ಟಿಪಿಎಫ್ ತಂಡ ವಶಕ್ಕೆ ಪಡೆದಿದೆ.
ನಂತರ ಬಂಧಿತನನ್ನು ಎಚ್.ಡಿ.ಕೋಟೆ ವಲಯ ಅರಣ್ಯಾಧಿಕಾರಿಗೆ ಹಸ್ತಾಂತರಿಸಲಾಗಿದ್ದು, ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ವಲಯ ಅರಣ್ಯಾಧಿಕಾರಿ ರಾಮಾಂಜನೇಯಲು, ಡಿಆರ್‌ಎಫ್‌ಒಗಳಾದ ವಿನೋದ್, ಜ್ಯೋತಿ ಕುಮಾರ್, ಅಪ್ಪಣ್ಣ ಕಾಂಬ್ಳೆ, ಸಂತೋಷ್ ಕಮಣೂರೆ, ಕೋಟೆ ವಲಯದ ಡಿಆರ್‌ಎಫ್‌ಒ ಮಹೇಶ್, ಬೀಟ್ ಪ್ರೆಸ್ಟರ್‌ಗಳಾದ ಮಲ್ಲಿಕಾರ್ಜುನ್, ಸುರೇಶ ಕಲ್ಲಪ್ಪ ಪೂಜಾರಿ, ನಿಂಗರಾಜು, ಉಮೇಶ, ಬೋಳ, ಕವಿನ, ಕಾಳ, ನಾಗೇಂದ್ರ, ಅರ್ಚನ, ಚಾಲಕ ಆದಿತ್ಯ ಇದ್ದರು.