

ಕೊಳ್ಳೇಗಾಲ: ಪಟ್ಟಣದ ಬಸ್ತೀಪುರ ವೃತ್ತದ ಬಳಿ ಭಾನುವಾರ ರಾತ್ರಿ 740 ಗ್ರಾಂ. ತೂಕದ ಒಣ ಗಾಂಜಾ ಸೊಪ್ಪನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಡಿವೈಎಸ್ಪಿ ಅಪರಾಧ ಪತ್ತೆ ದಳ ಪೊಲೀಸರು ಬಂಧಿಸಿದ್ದಾರೆ.
ಹನೂರು ತಾಲೂಕು ಶೆಟ್ಟಹಳ್ಳಿ ಗ್ರಾಮದ ನಿವಾಸಿ ಸಣ್ಣಕಾಳ (41) ಬಂಧಿತ ಆರೋಪಿ. ಹನೂರು ಕಡೆಯಿಂದ ಕೊಳ್ಳೇಗಾಲದ ಕಡೆಗೆ ಬೈಕ್‌ನಲ್ಲಿ ಅಕ್ರಮವಾಗಿ ಕೆನಾಬಿಸ್(ಗಾಂಜಾ) ಸಾಗಿಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ರಾತ್ರಿ 10.40 ರ ಸುಮಾರಿನಲ್ಲಿ ಡಿವೈಎಸ್ಪಿ ಅಪರಾಧ ಪತ್ತೆ ದಳ ಸಿಬ್ಬಂದಿ ಹಾಗೂ ಪಟ್ಟಣ ಠಾಣೆಯ ಪೊಲೀಸರು ಬಸ್ತೀಪುರ ವೃತ್ತದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸಣ್ಣಕಾಳ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಅಡಗಿಸಿಟ್ಟಿದ್ದ ಕವರ್‌ನಲ್ಲಿ 740 ಗ್ರಾಂ. ತೂಕದ ಗೊಂಡೆ ಮಿಶ್ರಿತ ಗಾಂಜಾ ಸೊಪ್ಪು ದೊರೆತಿದೆ. ಕೂಡಲೇ ಆರೋಪಿಯನ್ನು ಪಟ್ಟಣ ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿ ಹೊಟ್ಟೆ ಪಾಡಿಗಾಗಿ ಶೆಟ್ಟಹಳ್ಳಿ ಗ್ರಾಮದಿಂದ ಕೊಳ್ಳೇಗಾಲ ಪಟ್ಟಣದ ಸಾರ್ವಜನಿಕರಿಗೆ ಮಾರಾಟ ಮಾಡಲು ಬರುತ್ತಿರುವುದಾಗಿ ತಿಳಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಅಪರಾಧ ಪತ್ತೆ ದಳದ ಎಎಸ್‌ಐ ತಖೀವುಲ್ಲಾ, ಸಿಬ್ಬಂದಿ ವೆಂಕಟೇಶ್, ಬಿಳಿಗೌಡ, ಶಿವಕುಮಾರ್ ಪಟ್ಟಣ ಪೊಲೀಸ್ ಠಾಣೆ ಸಿಬ್ಬಂದಿ ವೀರೇಂದ್ರ, ಶಿವಮಂಜು ಮತ್ತಿತರರಿದ್ದರು.