ಚಿಂದಿ ಆಯುವವನನ್ನು ಕೊಂದಿದ್ದವನ ಬಂಧನ

Published on

ಹಲಗೂರು: ಇಲ್ಲಿನ ಸಂತೇಮಾಳ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಆ.24 ರಂದು ನಡೆದ ಕೊಲೆ ಆರೋಪಿಯನ್ನು ಹಲಗೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಸಬೀರ್ ಪಾಷ ಬಂಧಿತ ಆರೋಪಿ. ಮೈಸೂರು ಕುವೆಂಪುನಗರ ನಿವಾಸಿ ರಂಗಸ್ವಾಮಿ ಅವರ ಪುತ್ರ ರಮೇಶ್ ಚಿಂದಿ ಆಯ್ದುಕೊಂಡು ಹಲಗೂರಿನ ಶಾಲೆಯ ಹೊರಗೆ ಮಲಗುತ್ತಿದ್ದ. ಆ.24 ರಂದು ಶುಕ್ರವಾರ ರಾತ್ರಿ ಶಾಲಾ ಕೊಠಡಿಯ ಅವರಣದಲ್ಲಿ ಮಲಗಿದ್ದ ರಮೇಶ್ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಶನಿವಾರ ಬೆಳಗ್ಗೆ ಶಾಲೆ ತೆರೆಯಲು ಹೋದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ವೈ.ಎಸ್.ಪಿ ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಹಲಗೂರು ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಅಪರಾಧ ತನಿಖಾ ತಂಡ ಶುಕ್ರವಾರ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net