ಮಹಿಳೆಯರನ್ನು ವಂಚಿಸುತ್ತಿದ್ದವ ಅರೆಸ್ಟ್

bheema raj
Published on

ಶಿವಮೊಗ್ಗ: ಮ್ಯಾಟ್ರಿಮೊನಿಗಳಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣ, ಒಡವೆ ಪಡೆದುಕೊಂಡು ವಂಚಿಸುವುದೇ ಈತನ ಕಾಯಕ. ಹೀಗೆ ಈತನ ನಯವಂಚನೆಗೆ ಸಂಬಂಧಿಸಿ ರಾಜ್ಯದ ವಿವಿಧೆಡೆ 10 ಠಾಣೆಗಳಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ.

ಈತ ವಿಜಯಪುರದ ಹಿಟ್ಟನಹಳ್ಳಿ ಗ್ರಾಮದ ಭೀಮರಾಜ್ ಅಲಿಯಾಸ್ ಜೈ ಭೀಮ್(40). ಈತ ಭದ್ರಾವತಿಯ 40 ವರ್ಷದ ಮಹಿಳೆಯನ್ನು ಮ್ಯಾಟ್ರಿಮೊನಿ ಮೂಲಕ ಪರಿಚಯಿಸಿಕೊಂಡಿದ್ದ. ತಾನು ವಿವಾಹಿತ ಎಂಬುದನ್ನು ಮರೆಮಾಚಿದ್ದ. ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಬಳಿಕ ತನ್ನ ವಂಚಕ ಬುದ್ಧಿ ಬಳಸಿ ಆಕೆಯಿಂದ ಹಣ ಪಡೆದುಕೊಂಡಿದ್ದ.

ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ ಎಂದು ಸುಳ್ಳು ಹೇಳಿ ಫೋನ್ ಪೇ ಮೂಲಕ 2024ರಲ್ಲಿ ಹಂತಹಂತವಾಗಿ ಒಟ್ಟು 5.43 ಲಕ್ಷ ರೂ. ಪಡೆದುಕೊಂಡಿದ್ದ. ಬಳಿಕ ಆಕೆಯನ್ನು ಮುಖತಃ ಭೇಟಿಯಾಗಿ 30 ಗ್ರಾಂ ಚಿನ್ನಾಭರಣಗಳನ್ನೂ ತೆಗೆದುಕೊಂಡಿದ್ದ. ನಂತರ ಆಕೆಯೊಂದಿಗೆ ಸಂಬಂಧ ಕಡಿದುಕೊಂಡಿದ್ದ. ವಂಚನೆಗೊಳಗಾದ ಮಹಿಳೆ ಭದ್ರಾವತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಂಚಕನ ಜಾಡು ಹಿಡಿದು ಹೊರಟ ಶಿವಮೊಗ್ಗ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಇದೇ ರೀತಿ ಹಲವು ಮಹಿಳೆಯರಿಗೆ ವಂಚಿಸಿ ಹಣ, ಚಿನ್ನ ಪಡೆದ ಭೀಮರಾಜ್, ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳವನ್ನೂ ನೀಡಿದ್ದ. ಹೀಗಾಗಿ ಆಕೆ ನೀಡಿದ್ದ ದೂರಿನ ಅನ್ವಯ ಪೊಲೀಸರು ಭೀಮರಾಜ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ವಿಚಾರಣೆ ವೇಳೆ ಆತನ ವಿರುದ್ಧ ರಾಜ್ಯದ ವಿವಿಧೆಡೆ ದಾಖಲಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಎಲ್ಲೆಲ್ಲಿ ವಂಚನೆ?

ತಿಕೋಟ ಹಾಗೂ ಬಬಲೇಶ್ವರ ಠಾಣೆಯಲ್ಲಿ ತಲಾ 2 ಪ್ರಕರಣ. ವಿಜಯಪುರ, ಬಾಗಲಕೋಟೆ, ದೊಡ್ಡಬಳ್ಳಾಪುರ, ಭದ್ರಾವತಿ, ಮುದ್ದೇಬಿಹಾಳ, ಹೊರ್ತಿ, ಬೆಂಗಳೂರು, ಕೊಪ್ಪಳ ಠಾಣೆಗಳಲ್ಲಿ ತಲಾ ಒಂದು ಪ್ರಕರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net