

ಹಾಸನ: ಎಟಿಎಂಗಳಿಂದ ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದು, 1.07 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಅರಸೀಕೆರೆ ತಾಲೂಕು ಮಂಜೇನಹಳ್ಳಿ ಗ್ರಾಮದ ಧರ್ಮ (40) ಬಂಧಿತ. ಕೃಷಿ ಕೆಲಸ ಮಾಡಿಕೊಂಡಿರುವ ಧರ್ಮ ಹಣದ ಅವಶ್ಯಕತೆ ಬಿದ್ದಾಗ ಮುಗ್ಧ ಜನರಿಗೆ ನೆರವಾಗುವ ನಾಟಕವಾಡುತ್ತಿದ್ದ. ಹಾಸನ ಹಾಗೂ ದುದ್ದ ಠಾಣೆಯಲ್ಲಿ ದಾಖಲಾಗಿದ್ದ 7 ಪ್ರಕರಣಗಳ ಸೂತ್ರಧಾರ ಇವನೇ ಆಗಿದ್ದಾನೆ. 2.02 ಲಕ್ಷ ರೂ.ಗಳನ್ನು ಸಾರ್ವಜನಿಕರಿಂದ ಪೀಕಿರುವ ಧರ್ಮನಿಂದ 1.07ಲಕ್ಷ ರೂ.ಗಳನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಬದಲಿ ಕಾರ್ಡ್ ಕೊಡುತ್ತಿದ್ದ: ಹಾಸನದ ಎಚ್‌ಡಿಎಫ್‌ಸಿ, ಕಾರ್ಪೊರೇಷನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ದುದ್ದ ಗ್ರಾಮದಲ್ಲಿರುವ ಎಟಿಎಂನಲ್ಲಿ ಕೃತ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಎಟಿಎಂಗಳ ಮುಂದೆ ಗಂಟೆಗಟ್ಟಲೇ ನಿಲ್ಲುತ್ತಿದ್ದ. ಅನಕ್ಷರಸ್ಥ ನಾಗರಿಕರು ದುಡ್ಡು ಡ್ರಾ ಮಾಡಿಕೊಡು ಎಂದು ಕೇಳುವುದನ್ನೇ ಕಾಯುತ್ತಿದ್ದ. ಗ್ರಾಹಕರಿಂದ ಡೆಬಿಟ್ ಕಾರ್ಡ್ ಪಡೆದು ಪಿನ್ ನಂಬರ್ ಕೇಳಿಕೊಳ್ಳುತ್ತಿದ್ದ. ಒಂದೆರಡು ಬಾರಿ ತಪ್ಪು ಪಿನ್ ನಂಬರ್ ನಮೂದಿಸಿ ಎಟಿಎಂನಲ್ಲಿ ದುಡ್ಡಿಲ್ಲವೆಂದು ಸುಳ್ಳು ಹೇಳುತ್ತಿದ್ದ. ಆದರೆ ಗ್ರಾಹಕರಿಗೆ ವಾಪಸ್ ಕೊಡುತ್ತಿದ್ದ ಡೆಬಿಟ್ ಕಾರ್ಡ್ ಮಾತ್ರ ಬದಲಿಯಾಗಿರುತ್ತಿತ್ತು. ಇದಕ್ಕಾಗಿಯೇ ನಕಲಿ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದ. ಹಣ ಬರಲಿಲ್ಲವೆಂಬ ಜಿಗುಪ್ಸೆಯಲ್ಲಿ ಗ್ರಾಹಕರು ಕಾರ್ಡ್‌ನ್ನು ಪರಿಶೀಲಿಸದೆ ಅದನ್ನೇ ತೆಗೆದುಕೊಂಡು ಹೊರ ಹೋಗುತ್ತಿದ್ದರು. ಅವರು ಅಲ್ಲಿಂದ ತೆರಳಿದ ಬಳಿಕ ನಿಖರ ಪಿನ್ ನಂಬರ್ ಹೊಡೆದು ಹಣ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ಎನ್‌ಆರ್ ವೃತ್ತದಲ್ಲಿ ಸಿಕ್ಕಿಬಿದ್ದ: ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಪ್ರಕರಣ ದಾಖಲಿಸಿಕೊಂಡಿದ್ದ ಸಿಇಎನ್ ಠಾಣೆ ಪೊಲೀಸರು ಎಟಿಎಂಗಳಲ್ಲಿ ಗಸ್ತು ತಿರುಗುತ್ತಿದ್ದರು. ಸೋಮವಾರ ಸಂಜೆ 4ರ ಸಮಯದಲ್ಲಿ ಎನ್‌ಆರ್ ವೃತ್ತದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಹತ್ತಿರ ನಿಂತಿದ್ದ ಧರ್ಮನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ತಿಳಿದುಬಂದಿದೆ. ಆರೋಪಿಯನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೇದೆಗಳಾದ ಭಾನುಪ್ರಕಾಶ್ ಹಾಗೂ ಕೆಂಪೇಗೌಡರ ಕಾರ್ಯವನ್ನು ಪಿಎಸ್‌ಐ ಎಸ್.ಎಂ.ದೇವೇಂದ್ರಪ್ಪ ಶ್ಲಾಘಿಸಿದ್ದಾರೆ.