

ಬಂಕಾಪುರ: ಎಟಿಎಂ ಕಾರ್ಡ್ ತೆಗೆದುಕೊಡುವ ರೀತಿಯಲ್ಲಿ ನಟನೆ ಮಾಡಿ ಸಾರ್ವಜನಿಕರ ಎಟಿಎಂ ಬದಲಿಸಿ ಮೋಸದಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಕಳ್ಳನನ್ನು ಪಟ್ಟಣದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಗ್ರಾಮದ ಕಿರಣಕುಮಾರ ಕಾಳೆಗೌಡ (32) ಬಂಧಿತ ಆರೋಪಿ.
ಪಟ್ಟಣದಲ್ಲಿ ಕಳೆದ ವಾರ ಮಲ್ಲೇಶಪ್ಪ ದೊಡ್ಡಮನಿ ಎಂಬವರು ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ತಾನೂ ಕಾರ್ಡ್ ತೆಗೆದುಕೊಳ್ಳುವ ನೆಪದಲ್ಲಿ ಮಲ್ಲೇಶಪ್ಪ ಅವರ ಕಾರ್ಡ್ ಬದಲಿಸಿ 75 ಸಾವಿರ ರೂ. ಡ್ರಾ ಮಾಡಿಕೊಂಡಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿ 47 ಸಾವಿರ ರೂ. ನಗದು, 1 ಮೊಬೈಲ್ಫೋನ್, 60ಕ್ಕೂ ಅಧಿಕ ಎಟಿಎಂ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಕಿರಣಕುಮಾರ ಷೇರು ಮಾರುಕಟ್ಟೆಯಲ್ಲಿ ಹಣ ದ್ವಿಗುಣಗೊಳಿಸುತ್ತೇನೆ ಎಂದು ಹೋಟೆಲ್ ಮಾಲೀಕರು, ಅನಕ್ಷರಸ್ಥರು, ಮಹಿಳೆಯರು, ವಯೋವೃದ್ಧರನ್ನು ಗುರಿಯಾಗಿಸಿಕೊಂಡು ಅವರಿಗೆ ಸಹಾಯ ಮಾಡುವ ನೆಪದಲ್ಲಿ ಪಿನ್ ನಂಬರ್ ತಿಳಿದುಕೊಂಡು ಎಟಿಎಂ ಕಾರ್ಡ್ ಬದಲಾಯಿಸಿ ಹಣ ತೆಗೆಯುತ್ತಿದ್ದ. ಈತನ ವಿರುದ್ಧ ಹಾಸನದ ದುಡ್ಡಾ ಪೊಲೀಸ್ ಠಾಣೆ, ಕೊಡಗು, ಚಾಮರಾಜನಗರ, ಕುಮಟಾ, ಉಡುಪಿ, ದಾವಣಗೆರೆ, ಶಿರಾಳಕೊಪ್ಪ ಸೇರಿ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಪಿಎಸ್ಐಗಳಾದ ನಿಂಗರಾಜ ಕರಕಣ್ಣನವರ, ಎಸ್.ಎಂ. ವನಹಳ್ಳಿ, ಸಿಬ್ಬಂದಿಯಾದ ಕೆ. ರಜನಿ, ಎ.ಕೆ. ನದಾಫ, ಗೋವಿಂದ ಲಮಾಣಿ, ವೆಂಕಟೇಶ ಲಮಾಣಿ, ಬೀರಪ್ಪ ಕಳ್ಳಿಮನಿ, ನಿಂಗಪ್ಪ ಪೂಜಾರ, ಸತೀಶ ಮಾರಕಟ್ಟಿ, ಮಾರುತಿ ಹಾಲಬಾವಿ ಕಾರ್ಯಾಚರಣೆಯಲ್ಲಿದ್ದರು.