ಲೋಕಾ ಹೆಸರಲ್ಲಿ ಧೋಖಾಗೆ ಯತ್ನಿಸಿದವನ ಬಂಧನ

Published on

ರಾಮನಗರ

ಲೋಕಾಯುಕ್ತ ಡಿವೈಎಸ್​ಪಿ ಎಂದು ಹೇಳಿಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದವನನ್ನು ರಾಮನಗರ ಐಜೂರು ಪೊಲೀಸರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಜಯಸಿಂಗ್​ಪುರದ ನಿವಾಸಿ ಮುರೆಗಪ್ಪ ನಿಂಗಪ್ಪ ಕುಂಬಾರ (60) ಬಂಧಿತ ಆರೋಪಿ.

ಏನಾಗಿತ್ತು?

ಸೆ.23ರಂದು ಮಾಗಡಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಲ್​.ಸುರೇಂದ್ರ ಅವರಿಗೆ ಕರೆ ಮಾಡಿದ್ದ ಮುರೆಗಪ್ಪ, ಲೋಕಾಯುಕ್ತ ಡಿವೈಎಸ್​ಪಿ ಶಿವಪ್ರಸಾದ್​ ಎಂದು ಪರಿಚಯ ಮಾಡಿಕೊಂಡು, ನಿಮ್ಮ ಮೇಲೆ ದೂರು ಬಂದಿದ್ದು ಮನೆ, ಕಚೇರಿ, ಬ್ಯಾಂಕ್​ಗಳ ಮೇಲೆ ದಾಳಿ ಮಾಡಬೇಕಾಗುತ್ತದೆ. ಇದನ್ನು ತಡೆದು ಪ್ರಕರಣಕ್ಕೆ ಸಿ ರಿಪೋರ್ಟ್​ ನೀಡಬೇಕಾದರೆ 60 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಷ್ಟು ಹಣ ಇಲ್ಲ ಎಂದು ಸುರೇಂದ್ರ ಹೇಳಿದಾಗ 30 ಸಾವಿರ ರೂ. ನೀಡುವಂತೆ, ಇದನ್ನು ಗೂಗಲ್​ ಪೇ ಮಾಡುವಂತೆ ಒತ್ತಾಯಿಸಿದ್ದ. ಇದರಿಂದ ಅನುಮಾನಗೊಂಡು ರಾಮನಗರ ಲೋಕಾಯುಕ್ತ ಕಚೇರಿಯಲ್ಲಿ ಸುರೇಂದ್ರ ವಿಚಾರಿಸಿದಾಗ ದೂರು ನೀಡುವಂತೆ ಸೂಚನೆ ನೀಡಿದ್ದರು. ಐಜೂರು ಪೊಲೀಸರಿಗೆ ಸುರೇಂದ್ರ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಅಧಿಕಾರಿಗೆ ಬಂದಿದ್ದ ಮೊಬೈಲ್​ ಸಂಖ್ಯೆಯ ಜಾಡು ಹಿಡಿದು ಹೋದಾಗ ಆರೋಪಿ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದಾನೆ.

ಇದೇ ಕಸುಬು

ಅಧಿಕಾರಿಗಳನ್ನು ಬೆದರಿಸಿ ಹಣ ಪಡೆಯುವುದೇ ಬಂಧಿತ ಮುರೆಗಪ್ಪನ ಕಸುಬಾಗಿದೆ. ಈತನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 7 ಪ್ರಕರಣಗಳಲ್ಲಿ ಖುಲಾಸೆ ಹೊಂದಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net