ಅತ್ಯಾಚಾರಕ್ಕೆ ಯತ್ನಿಸಿದವನ ಬಂಧನ

Published on

ಯಳಂದೂರು: ಗ್ಯಾಸ್ ಸಿಲಿಂಡರ್ ಕೊಡುವ ನೆಪದಲ್ಲಿ ಬಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗ್ಯಾಸ್ ವಿತರಣೆ ಮಾಡುವ ನೌಕರ ಮಹೇಶ್ ಬಂಧಿತ ಆರೋಪಿ.

ಈತ ಮೇ 21ರಂದು ಸಂತೇಮರಹಳ್ಳಿ ಮನೆಯೊಂದಕ್ಕೆ ಗ್ಯಾಸ್ ಸಿಲಿಂಡರ್ ಕೊಡುವುದಕ್ಕೆ ಬಂದಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಮಹಿಳೆ ನಾನು ಗ್ಯಾಸ್ ಬುಕ್ ಮಾಡಿಲ್ಲ ಎಂದು ಹೇಳಿದ್ದಾರೆ. ನಾವು ಬುಕ್ ಮಾಡದಿದ್ದರೂ ಕೊಡುತ್ತೇವೆ, ತೆಗೆದುಕೊಳ್ಳಿ ಎಂದು ಹೇಳಿ 920 ರೂ. ಹಣ ಪಡೆದು ಸಿಲಿಂಡರ್ ನೀಡಿದ್ದಾನೆ.

ನಂತರ ಗ್ಯಾಸ್ ಕಂಪನಿಯಿಂದ ಕೆವೈಸಿ ಮಾಡಬೇಕು. ಹಾಗಾಗಿ ಮನೆ ಫೋಟೋ ತೆಗೆದು ಅಪ್‌ಲೋಡ್ ಮಾಡಬೇಕು ಎಂದು ಹೇಳಿ ಮಹಿಳೆಯನ್ನು ಗ್ಯಾಸ್ ಸಿಲಿಂಡರ್ ಬಳಿ ನಿಲ್ಲಿಸಿ ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾನೆ. ನಂತರ ಕೇಂದ್ರ ಸರ್ಕಾರದ ಆದೇಶವಿದ್ದು ಅಡುಗೆ ಮನೆಯಲ್ಲಿ ಗಾಳಿ, ಬೆಳಕು ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು ಎಂದು ಮಹಿಳೆಗೆ ಹೇಳಿ ಅಡುಗೆ ಮನೆಗೆ ಬಂದಿದ್ದಾನೆ. ಬಂದ ಕೂಡಲೇ ಮಹಿಳೆಯನ್ನು ತಳ್ಳಿ, ಚಾಕು ತೋರಿಸಿ ಕಿರುಚಿದರೆ ನಿನ್ನನ್ನು ಇಲ್ಲೇ ಮುಗಿಸಿಬಿಡುತ್ತೇನೆ ಎಂದು ಮಹೇಶ್ ಬೆದರಿಕೆ ಹಾಕಿದ್ದಾನೆ.

ಬಳಿಕ ಮಹಿಳೆ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದು ಮಹಿಳೆಯನ್ನು ಎಳೆದಾಡಿ ಕಿರುಕುಳ ನೀಡಿದ್ದಾನೆ. ಮಹಿಳೆ ಎದೆ ಮತ್ತು ಮುಖಕ್ಕೆ ಚಾಕುವಿನಿಂದ ಇರಿದು ಜೀವ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net