

ಶೃಂಗೇರಿ: ಅಚ್ಚುಕಟ್ಟಿನ ಅರ್ಥಿಕ ಸದೃಢತೆಯನ್ನು ಪಡೆದ ಮ್ಯಾಮ್ಕೋಸ್ ಸಂಸ್ಥೆಯು ರೈತರ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದು, ಷೇರುದಾರರ ಭಾವನೆಯನ್ನು ಅರ್ಥ್ಯೆಸಿಕೊಂಡು ಸಂಸ್ಥೆಯನ್ನು ಮುನ್ನಡೆಸುವುದು ನಮ್ಮ ಧ್ಯೇಯ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳ್ಳಿ ಹೇಳಿದರು.
ಶ್ರೀ ಚಪ್ಪರದಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಸಹಕಾರ ಭಾರತಿಯ ಜಿಲ್ಲಾ ಸಮಿತಿ ಆಯೋಜಿಸಿದ್ದ ಮ್ಯಾಮ್ಕೋಸ್ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆ ಹಾಗೂ ಕೊಳೆ ಸಾಲವನ್ನು ಎರಡು ಲಕ್ಷ ರೂ.ಹಾಗೂ ಜೌಷಧ ಸಾಲವನ್ನು 25 ಸಾವಿರಕ್ಕೆ ರೂ.ಏರಿಸಲಾಗಿದೆ. ವಿಮಾ ಗುಂಪಿನ ಯೋಜನೆ ಮೂಲಕ ಕೂಲಿ ಕಾರ್ಮಿಕರು ಹಾಗೂ ಷೇರುದಾರರಿಗೆ ಸಕಾಲಕ್ಕೆ ಪರಿಹಾರ ಮೊತ್ತ ನೀಡುತ್ತಾ ಬರಲಾಗಿದೆ ಎಂದರು.
ಸಂಘದ ಜತೆ ಷೇರುದಾರರು ನಿಕಟ ಸಂಪರ್ಕಕ್ಕೆ ಸಮಾಲೋಚನಾ ಸಭೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಷೇರುದಾರರ ಕುಂದು ಕೊರತೆಗಳಿಗೆ ಸ್ಪಂದಿಸುವಲ್ಲಿ ಸಂಸ್ಥೆಯು ಪಾರದರ್ಶಕವಾಗಿ ಕಪ್ಪುಚುಕ್ಕಿ ಇಲ್ಲದೇ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಶೃಂಗೇರಿಯಲ್ಲಿ ಗೋಡೌನ್ ವಿಸ್ತರಣೆ ಮಾಡಬೇಕು. ಆರೋಗ್ಯ ವಿಮೆಯಲ್ಲಿ 13 ಪ್ರಕರಣಗಳು ತಾಂತ್ರಿಕ ದೋಷದಿಂದ ಪಾವತಿಸಲು ತೊಂದರೆಯಾಗಿದ್ದು, ಅವರು ಬಳಕೆದಾರರ ಕೋರ್ಟ್‌ಗೆ ಹೋಗಿದ್ದಾರೆ. ಸಂಸ್ಥೆ ವತಿಯಿಂದ ಅವರಿಗೆ ನ್ಯಾಯ ನೀಡಲು ಶ್ರಮಿಸಲಾಗುತ್ತಿದೆ. 874 ಜನರಿಗೆ ಸುಮಾರು 1.84 ಕೋಟಿ ರೂ. ವಿಮಾ ಹಣವನ್ನು ಪಾವತಿಸಲಾಗಿದೆ. ಷೇರುದಾರರ ಸಮಸ್ಯೆ ಬಗೆಹರಿಸಲು ಆಡಳಿತ ಮಂಡಳಿ ಸದಾ ಷೇರುದಾರರ ಜತೆಗೆ ಇರುತ್ತದೆ ಎಂದರು.
ಷೇರುದಾರರಾದ ಶಂಕರಪ್ಪ, ರಾಮಣ್ಣಗೌಡರು, ಅರುಣ ಕುಮಾರ್, ಕೆ.ಆರ್.ಅವಿನಾಶ್, ಸುಬ್ರಮಹ್ಮಣ್ಯ ಶಾಸಿ, ಎಚ್.ಎಸ್.ರತ್ನಾಕರ್, ಸಹಕಾರ ಭಾರತಿ ರಾಜ್ಯ ಸಂಚಾಲಕರಾದ ಯಡೆಗೆರೆ ಸುಬ್ರಹ್ಮಣ್ಯ, ಸಹಕಾರ ಭಾರತಿ ಸಂಸ್ಥೆ ಜಿಲ್ಲಾ ಸಮಿತಿ ಮಹಿಳಾ ಪ್ರಮುಖರಾದ ಸುಧಾ ಪೈ,ಮ್ಯಾಮ್ಕೋಸ್ ನಿರ್ದೇಶಕರಾದ ಜಯಶ್ರೀ, ವಿರೂಪಾಕ್ಷಪ್ಪ, ಟಿ.ಕೆ.ಪರಾಶರ, ಅಂಬ್ಲೂರು ಸುರೇಶ್ಚಂದ್ರ, ರತ್ನಾಕರ ಹಾಜರಿದ್ದರು.