

ಮಂಡ್ಯ: ಹೃದಯ ಶ್ರೀಮಂತಿಕೆ ಇದ್ದರೆ ಮಾತ್ರ ಬೇರೆಯವರ ಮುಖದಲ್ಲಿ ನಗು ನೋಡಲು ಸಾಧ್ಯ. ಅಂತೆಯೇ ಅಸಹಾಯಕಾರಿಗೆ ನೆರವಾಗುವುದು ಪುಣ್ಯದ ಕೆಲಸ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಹೆರಿಗೆ ವಾರ್ಡ್ ಆವರಣದಲ್ಲಿ ಮಮತೆಯ ಮಡಿಲು ನಿತ್ಯ ಅನ್ನ ದಾಸೋಹ ಕೇಂದ್ರ ಐದು ವರ್ಷ ಪೂರೈಸಿ ಆರನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯಲು ಬರುವ ಬಂಧುಗಳು ಹಣವಂತರಲ್ಲ. ಇಂತಹ ಅಸಹಾಯಕರು, ನಿರ್ಗತಿಕರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಾರ್ಥ ರಹಿತವಾಗಿ ತಾಯಿ ಪ್ರೀತಿಯಿಂದ ಅನ್ನ ಹಾಕುವುದರಿಂದ ಅವರ ಮುಖದಲ್ಲಿ ನಗು ನೋಡಲು ಸಾಧ್ಯ. ಯೋಗೇಶ್ ಹಾಗೂ ಅರುಣ ಕುಮಾರಿ ದಂಪತಿ ಅನ್ನ ದಾಸೋಹ ಕಾರ್ಯಕ್ರಮ ಶ್ಲಾಘನೀಯ ಎಂದರು.
ಶ್ರೀಮಂತರಾಗಿರುವವರು ಅನ್ನ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಹಣ ಇದ್ದವರು ಅನ್ನ ಕೊಡುವುದು, ಸಹಾಯ ಮಾಡುವುದು ದೊಡ್ಡದಲ್ಲ. ಶ್ರೀಮಂತಿಕೆ ಇಲ್ಲದೆ ನಾಲ್ಕು ಜನಕ್ಕೆ ಕಷ್ಟದಲ್ಲಿರುವವರ ನೋವನ್ನು ನೋಡಿ ಕಣ್ಣೀರು ಹೊರಿಸುವುದು ಬಹಳ ಮುಖ್ಯವಾದದು. ಮಮತೆಯ ಮಡಿಲು ಅನ್ನ ದಾಸೋಹದಲ್ಲಿ ಐದು ವರ್ಷ ಒಂದು ದಿನವೂ ವಿರಾಮ ತೆಗೆದುಕೊಳ್ಳದೆ ಅನ್ನ ದಾಸೋಹ ವಿತರಣೆ ಮಾಡುತ್ತಿದ್ದಾರೆ. ಪ್ರತಿನಿತ್ಯ ದೇವಾಲಯಗಳಲ್ಲಿ ಅನ್ನದಾಸೋಹ ಮಾಡುವುದನ್ನು ನಾವು ನೋಡುತ್ತೇವೆ. ಯೋಗೇಶ್ ಮತ್ತು ಅರುಣಕುಮಾರಿ ದಂಪತಿ ಸ್ವಾರ್ಥ ರಹಿತ ಸೇವೆ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ಪ್ರಾಮಾಣಿಕತೆಗೆ ಪರಿಶುದ್ಧ ಮನಸ್ಸಿಗೆ ಎಷ್ಟು ಮಾತು ಹೇಳಿದರು ಕಷ್ಟ. ಸತ್ಕಾರ್ಯಗಳನ್ನು ದೇವರು ಕೆಟ್ಟವರಿಂದ ಮಾಡಿಸಿಕೊಳ್ಳಲ್ಲ. ಹಾಗಾಗಿ ನಿಮ್ಮ ಸೇವೆಯನ್ನು ದೇವರ ಸೇವೆ ಎಂದು ಮಮತೆಯ ಮಡಿಲು ಕೆಲಸ ಮಾಡುತ್ತಿದೆ. ಅನ್ನ ಎಂದರೆ ದೇವರು. ತಿನ್ನುವ ಅನ್ನದಲ್ಲಿ ನಾವು ದೇವರನ್ನು ಕಾಣಬಹುದು. ಅನ್ನ ಇಲ್ಲದೆ ಬದುಕಲು ಆಗಲ್ಲ. ಹಾಗಾಗಿ ಮಮತೆಯ ಮಡಿಲು ಎಂದರೆ ವಾತ್ಸಲ್ಯ ತಾಯಿ ಮಗು ಸಂಬಂಧ ಇದ್ದಂತೆ ಎಂದು ಹೇಳಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದ ಮಂಗಲ ಎಂ.ಯೋಗೇಶ್, ಕೆ.ಪಿ.ಅರುಣಕುಮಾರಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮ್, ಜಿ.ಎನ್.ಕೆಂಪರಾಜು ಇದ್ದರು.