

ಹಾನಗಲ್ಲ: ಹೈಕಮಾಂಡ್ ಒಪ್ಪಂದದಂತೆ ನಾಲ್ಕು ತಿಂಗಳಿಗೂ ಅಧಿಕ ಕಾಲ ಪುರಸಭೆ ಅಧ್ಯಕ್ಷರಾಗಿದ್ದ ಮಮತಾ ಆರೆಗೊಪ್ಪ ಅವರು ಸವಣೂರು ಉಪವಿಭಾಗಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದು, ಅಧಿಕಾರಾವಧಿ ತೃಷ್ತಿ ಮತ್ತು ಸಮಾಧಾನ ತಂದಿದೆ. ಪಟ್ಟಣದ ಅಭಿವೃದ್ಧಿಯಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಿರುವ ಸಂತೃಪ್ತಿಯಿದೆ ಎಂದು ತಿಳಿಸಿದರು. ನನ್ನ ಅಧಿಕಾರವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬೀದಿ ದೀಪ, ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದರು.
ಅಲ್ಪ ಅವಧಿಯಲ್ಲಿ ಪಟ್ಟಣದ ಮುಖ್ಯ ರಸ್ತೆಗೆ ಸುಸಜ್ಜಿತ ವಿದ್ಯುದ್ದೀಪ ಅಳವಡಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕುಡಿಯುವ ನೀರಿನ ಮೇಲ್ಮಟ್ಟದ ಜಲಾಗಾರ ಲೋಕಾರ್ಪಣೆಯಾಗಿದೆ. ಅನುದಾನದ ಕೊರತೆಯ ನಡುವೆಯೂ ಅಗತ್ಯವಿರುವ ಸೌಲಭ್ಯ ಒದಗಿಸುವಲ್ಲಿ ಪುರಸಭೆಯ ಎಲ್ಲ ಸದಸ್ಯರು, ಸಿಬ್ಬಂದಿ ಸಹಕರಿಸಿದ್ದಾರೆ. ಮುಂದಿನ ಅಧ್ಯಕ್ಷರಿಗೂ ಸಹಕಾರ ನೀಡಿ ಪಟ್ಟಣಕ್ಕೆ ಮೂಲಸೌಕರ್ಯ ಒದಗಿಸಲು ಕೈಜೋಡಿಸುತ್ತೇನೆ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಮಾಜಿ ಉಪಾಧ್ಯಕ್ಷೆ ಶಂಶಿಯಾಬಾನು ಬಾಳೂರ, ಹಸೀನಾಬಿ ನಾಯಕನವರ, ಇತರರಿದ್ದರು.