

ಮಂಗಳೂರು: ನಗರದಾದ್ಯಂತ ಮಾದಕ ವಸ್ತುವಾದ ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್‌ಗಳ ತಂಡದ ಇನ್ನೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತೋಡಾರು ಗ್ರಾಮದ ವಿ.ಎಂ.ಟಿ. ರೋಡ್ ನಿವಾಸಿ ಅಬ್ದುಲ್ ಉವೇಸ್ ಯಾನೆ ಉವೇಸ್ (29) ಬಂಧಿತ ಆರೋಪಿ. ಈತ ಪ್ರಸ್ತುತ ಫಳ್ನೀರ್‌ನ ವಾಸ್‌ಲೇನ್ ವಿಶ್ವಾಸ್ ಗಾರ್ಡನ್‌ನಲ್ಲಿ ವಾಡ ಮಾಡುತ್ತಿದ್ದ. ಈತನಿಂದ ಒಟ್ಟು 8 ಗ್ರಾಂ ತೂಕದ ರೂ. 40,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮೊಬೈಲ್ ಫೋನ್ 1, ನಗದು 1020 ರೂ., ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 81,520 ರೂ. ಆಗಬಹುದು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆರೋಪಿ ಅಬ್ದುಲ್ ಉವೇಸ್ ಎಂಬಾತನ ವಿರುದ್ಧ ಈ ಹಿಂದೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕಿಡ್ನಾಫ್ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ/ ಸೇವನೆ ಪ್ರಕರಣ, ಮೈಸೂರು ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ, ಉಡುಪಿ ಜಿಲ್ಲೆ ಸೆನ್ ಪೊಲೀಸ್ ಠಾಣೆಯಲ್ಲಿ ಐ ಟಿ ಅಕ್ಟ್ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಗಳ ಪೈಕಿ 3 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ 3 ವಾರಂಟ್ ಜ್ಯಾರಿಯಲ್ಲಿರುತ್ತದೆ.
ಜು.20ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ 2 ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬಂದು ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರನ್ನು ದಸ್ತಗಿರಿ ಮಾಡಿ ಅವರ ವಶದಿಂದ 180 ಗ್ರಾಂ ಮಾದಕ ವಸ್ತುವಾದ ಎಂಡಿಎಂಎ, ಎರಡು ಕಾರು, ಪಿಸ್ತೂಲ್, ಡ್ರಾಗನ್ ಚೂರಿ, ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವರು ನೀಡಿದ ಮಾಹಿತಿ ಪ್ರಕಾರ ಈ ಆರೋಪಿಯನ್ನು ಬಂಧಿಸಲಾಗಿದೆ.ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್‌ಐಯವರಾದ ರಾಜೇಂದ್ರ ಬಿ, ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.