ಮಾಲೂರು ಪುರಸಭೆ ಚುನಾವಣೆ ಮುಂದೂಡಿದ್ರೆ ಹೋರಾಟ

8-klr-3 Alternative
Published on

ಕೋಲಾರ: ಸಂಸದ ಎಸ್.ಮುನಿಸ್ವಾಮಿ ಒತ್ತಡಕ್ಕೆ ಮಣಿದು ಡಿಸಿ ಸಿ.ಸತ್ಯಭಾಮ ಮಾಲೂರು ಪುರಸಭೆಗೆ ನ.10ಕ್ಕೆ ನಿಗದಿಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮುಂದೂಡಲು ನಿರ್ದೇಶನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದೂಡಿದಲ್ಲಿ ಕಾನೂನು ಹೋರಾಟದ ಜತೆಗೆ ಜಿಲ್ಲೆಯಾದ್ಯಂತ ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕಾದೀತು ಎಂದು ಶಾಸಕ ಕೆ.ವೈ.ನಂಜೇಗೌಡ ಎಚ್ಚರಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಸಭೆಯ 27 ಸ್ಥಾನಗಳಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಕಾಂಗ್ರೆಸ್ 11, ಬಿಜೆಪಿ 10, ಜೆಡಿಎಸ್ 1, ಪಕ್ಷೇತರರ 5 ಸದಸ್ಯರು ಗೆದ್ದಿದ್ದರು. ಇವರಲ್ಲಿ 3 ಸದಸ್ಯರು ಕಾಂಗ್ರೆಸ್ ಬೆಂಬಲಕ್ಕಿದ್ದಾರೆ ಎಂದರು.

ಪುರಸಭೆಗೆ ನ.5ಕ್ಕೆ ನಿಗದಿಪಡಿಸಬೇಕಿದ್ದ ಚುನಾವಣೆಯನ್ನು ಆಪರೇಷನ್ ಕಮಲ ನಡೆಸಲು ಕಾಲಾವಕಾಶಕ್ಕಾಗಿಯೇ ಬಿಜೆಪಿ ಚುನಾವಣಾಧಿಕಾರಿಗಳ ಮೇಲೆ ಒತ್ತಡ ತಂದು 10ಕ್ಕೆ ನಿಗದಿಪಡಿಸಿದೆ. ತಮ್ಮ ಸದಸ್ಯರೊಬ್ಬರು ಅಪಹರಣವಾಗಿರುವುದಾಗಿ ಬಿಜೆಪಿ ಅಧ್ಯಕ್ಷ ಪುರ ನಾರಾಯಣಸ್ವಾಮಿ ಠಾಣೆಗೆ ದೂರಿದ್ದಾರೆ. ತಮ್ಮನ್ನು ಯಾರೂ ಅಪಹರಿಸಿಲ್ಲ, ಬಟ್ಟೆ ವ್ಯಾಪಾರಕ್ಕೆಂದು ಹೋಗಿದ್ದಾಗಿ ಸ್ವತಃ ಸದಸ್ಯರೇ ವೀಡಿಯೋ ಮಾಡಿ ಚುನಾವಣಾಧಿಕಾರಿಗಳಾದ ಡಿಸಿ, ತಹಸೀಲ್ದಾರ್‌ಗೆ ಕಳುಹಿಸಿದ್ದಾರೆ. ಅಪಹರಣ ಬಗ್ಗೆ ಎಫ್‌ಐಆರ್ ದಾಖಲಿಸಲು ಸದಸ್ಯರು ಅಥವಾ ಅವರ ಕುಟುಂಬಸ್ಥರು ದೂರು ನೀಡಿಲ್ಲ ಎಂದರು.

ಸಂಸದರು ಪುರಸಭೆ ಅಧಿಕಾರ ಹಿಡಿಯಲು ವಾಮಮಾರ್ಗಕ್ಕಿಳಿದು, ಚುನಾವಣೆ ಮುಂದೂಡಲು ಡಿಸಿ ಮೇಲೆ ಒತ್ತಡ ಹಾಕಿದ್ದಾರೆ. ಇದಕ್ಕೆ ಮಣಿದ ಡಿಸಿ, ಚುನಾವಣೆ ಮುಂದೂಡಲು ನಿರ್ದೇಶನ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಧಿಕಾರಿಗಳು ಕಾನೂನು, ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಸಚಿವ, ಸಂಸದರ, ಶಾಸಕರ ಕೈಗೊಂಬೆ ಆಗಬಾರದು ಎಂದು ಹೇಳಿದರು. ಅಧಿಕಾರ ಹಿಡಿಯಲು ಕಾಂಗ್ರೆಸ್ ಅಗತ್ಯ ಸಂಖ್ಯಾಬಲ ಹೊಂದಿದೆ. ಇವರ‌್ಯಾರನ್ನೂ ಬಿಜೆಪಿ ಖರೀದಿಸಲು ಸಾಧ್ಯವಿಲ್ಲ, ಬಿಜೆಪಿ ಸದಸ್ಯರನ್ನು ಸೆಳೆಯುವ ಅವಶ್ಯಕತೆಯೂ ನಮಗಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಬಂಗಾರಪೇಟೆ ಪುರಸಭೆ ಮತ್ತು ಕೆಜಿಎಫ್ ನಗರಸಭೆಯಲ್ಲಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿದೆ. ಮಾಲೂರಿನಲ್ಲೂ ಪಕ್ಷ ಅಧಿಕಾರಕ್ಕೆ ಬರಲಿದೆ. ಇದನ್ನು ತಪ್ಪಿಸಲು ಮುನಿಸ್ವಾಮಿ ಚುನಾವಣೆ ಮುಂದೂಡಲು ಅಧಿಕಾರಿಗಳ ಮೂಲಕ ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಂಸದರು ಹೋದ ಕಡೆಯಲ್ಲೆಲ್ಲ ಘೇರಾವ್ ಹಾಕಬೇಕಾಗುತ್ತದೆ. ಮುಂದೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ನುಡಿದರು.

ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಜೆಡಿಎಸ್ ಮುಖಂಡ ಹನುಮಂತಪ್ಪ ಇದ್ದರು.

ಬಿಜೆಪಿ ಮಿಮಿಕ್ರಿಯಲ್ಲೂ ಎಕ್ಸ್‌ಪರ್ಟ್: ಟ್ರಿಪ್ ಮುಗಿಸಿ ನನ್ನ ಬಳಿ ಬಂದು ಮಾತನಾಡಿ, ಹಣದ ವ್ಯವಸ್ಥೆ ಮಾಡೋಣ ಬನ್ನಿ ತಲೆಕೆಡಿಸಿಕೊಳ್ಳಬೇಡಿ ಎಂಬ ತಮ್ಮ ಆಡಿಯೋ ವೈರಲ್ ಕುರಿತು ನಾನು ಪಕ್ಷೇತರ ಸದಸ್ಯರ ಬಳಿ ಮಾತನಾಡಿರುವುದು ನಿಜ. ಆದರೆ ಪಕ್ಷೇತರ ಸದಸ್ಯ ರಾಜಪ್ಪ ಜತೆ ಹಣದ ಬಗ್ಗೆ ಮಾತನಾಡಿದ್ದು ನಾನಲ್ಲ. ಚುನಾವಣೆ ಮುಂದೂಡಲು ಬಿಜೆಪಿ ಮಾಡಿರುವ ಕುತಂತ್ರ. ಆಪರೇಷನ್ ಕಮಲ ಮಾಡುವುದರ ಜತೆಗೆ ಮಿಮಿಕ್ರಿ ಮಾಡೋದ್ರಲ್ಲೂ ಎಕ್ಸ್‌ಪರ್ಟ್. ಆಡಿಯೋದಲ್ಲಿ ಮಾತನಾಡಿರುವುದು ನಾನೇ ಎಂದು ರುಜವಾತು ಪಡಿಸಿದರೆ ರಾಜೀನಾಮೆ ನೀಡುತ್ತೇನೆ. ಅಲ್ಲದಿದ್ದರೆ ಸಂಸದರು ನೀಡುತ್ತಾರ ಎಂದು ಎಂದು ಶಾಸಕ ಕೆ.ವೈ.ನಂಜೇಗೌಡ ಸವಾಲು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net