

*ಚೋಳ ಶಾಸನಗಳಲ್ಲಿದೆ ಏಕಲವ್ಯ ಹುಟ್ಟಿದ ಸ್ಥಳವೆಂಬ ಉಲ್ಲೇಖ
* ಅತ್ಯಂತ ಪ್ರಾಚೀನ ಗ್ರಾಮವೆಂಬ ಖ್ಯಾತಿ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ತಾಲೂಕಿನ ಅತ್ಯಂತ ಪುರಾತನ ಗ್ರಾಮ ಮಳೂರುಪಟ್ಟಣ ಧಾರ್ಮಿಕ ಹಾಗೂ ಸಾಮಾಜಿಕ ಸಾಮರಸ್ಯದ ನೆಲೆವೀಡಾಗಿದೆ. ಗಂಗರಿಂದ ಪ್ರಾರಂಭಗೊಂಡು ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಚನ್ನಪಟ್ಟಣ ಪಾಳೇಗಾರರು, ಮೈಸೂರು ಒಡೆಯರು ಚನ್ನಪಟ್ಟಣದಲ್ಲಿ ಆಳ್ವಿಕೆ ನಡೆಸಿದ್ದಾರೆ. ಇಂತಹ ರಾಜಮನೆತನಗಳ ಆಳ್ವಿಕೆಯನ್ನು ಕಂಡಿರುವ ಇತಿಹಾಸ ಈ ಗ್ರಾಮಕ್ಕಿದೆ.
ತಾಲೂಕು ಕೇಂದ್ರದಿಂದ ಕೆಲವೇ ಕಿಮೀ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಹಾಗೂ ಪುರಾತನ ಗ್ರಾಮಗಳಲ್ಲಿ ಮಳೂರುಪಟ್ಟಣವೂ ಒಂದು. ಇದು ಅತ್ಯಂತ ಪ್ರಾಚೀನ ಗ್ರಾಮವಾಗಿದ್ದು, ಚೋಳರ ಕಾಲದ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಇದರೊಂದಿಗೆ ಗಂಗರಸರು ಆಳ್ವಿಕೆ ನಡೆಸಿರುವ ಇತಿಹಾಸವಿದೆ.
ವಿಜಯನಗರದ ಅರಸರ ಕಾಲದಲ್ಲಿ ಈ ಗ್ರಾಮ ಪಾಳೆಯಪಟ್ಟ ಹೊಂದಿತ್ತು. ಕರ್ನಾಟಕದಲ್ಲಿ ಚೋಳರ ಪ್ರಭಾವ ದಟ್ಟವಾಗಿದ್ದ ಗ್ರಾಮಗಳಲ್ಲಿ ಈ ಮಳೂರುಪಟ್ಟಣ ಪ್ರಮುಖ ಕೇಂದ್ರ ಎನ್ನಬಹುದು. ಮಕ್ಕಳೂರು ಪಟ್ಟಣ ಹಾಗೂ ಮಣಲೂರು ಎನ್ನಲಾಗುತ್ತಿದ್ದ ಗ್ರಾಮ ಕಾಲಕ್ರಮೇಣ ಮಳೂರುಪಟ್ಟಣ ಎಂದು ಬದಲಾಗಿದೆ ಎನ್ನಲಾಗುತ್ತದೆ. ಗಂಗರಸನೊರ್ವ ತನ್ನ ಇಬ್ಬರು ಮಕ್ಕಳಿಗೆ ಆಡಳಿತ ವ್ಯವಸ್ಥೆ ತಿಳಿದುಕೊಳ್ಳಲು ಈ ಗ್ರಾಮಕ್ಕೆ ನಿಯೋಜಿಸಿದ್ದ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಮಕ್ಕಳೂರುಪಟ್ಟಣ ಎನ್ನಲಾಗುತಿತ್ತು ಎನ್ನುವ ಮಾತಿದೆ.
ಚೌಡೇಶ್ವರಿ ತಾಯಿ ಗ್ರಾಮದೇವತೆಯಾಗಿ ನೆಲೆಸಿದ್ದಾಳೆ. ಇದರೊಂದಿಗೆ, ಊರಮುಂಭಾಗವಿರುವ ದುರ್ಗಾಪರಮೇಶ್ವರಿ, ಚಾಮುಂಡೇಶ್ವರಿ, ಶಿವನ ದೇವಾಲಯ, ಚಾಮುಂಡೇಶ್ವರಿ, ರಾಮಮಂದಿರ, ಮಂಠೇಸ್ವಾಮಿ ಮಠ ಸೇರಿ ಹಲವು ದೇಗುಲಗಳಿವೆ. ಗ್ರಾಮದೇವತೆ ಚೌಡೇಶ್ವರಿ ಕೊಂಗನಾಡಿನಿಂದ(ತಮಿಳುನಾಡು) ನಿಂದ ಬಂದವರು ಎಂಬುದಾಗಿಯೂ, ಮಳೂರು ಪಟ್ಟಣದ ತಾಯಬ್ಬೆಯ ಮಗಳು ಕಳ್ಳಿಮೇಳಮ್ಮ ಇಲ್ಲಿಂದ ಕಂಚಿಗೆ ಸ್ಥಳಾಂತರಗೊಂಡು ಪ್ರತಿಷ್ಠಾಪನೆಯಾಗಿದ್ದಾಳೆ ಎಂಬುದನ್ನು ಇಲ್ಲಿನ ಹಿರಿಯರು ಸ್ಮರಿಸುತ್ತಾರೆ.
ಮಳೂರುಪಟ್ಟಣ ಸಾಮರಸ್ಯದ ಬೀಡಾಗಿದೆ. ಗ್ರಾಮದ ಪ್ರತಿಬೀದಿಗಳಿಗೂ ಹಳೆಯ ಹೆಸರುಗಳಿವೆ. ತೇರಿನ ಬೀದಿ, ದ್ಯಾವನಗೇರಿ, ಅರೆಕಲ್ಲು ಬೀದಿ, ಮೂಲೆಕೇರಿ, ಟೆಂಡ್ ರಸ್ತೆ, ಕೊಪ್ಪಲು ಬೀದಿ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಯುಗಾದಿ ಹಬ್ಬದಂದು ತಂಬಿಟ್ಟು ಆರತಿ, ಬಂಡಿ ಮೆರವಣಿಗೆ ಹಾಗೂ ಸಾವಿರಾರು ಈಡುಗಾಯಿ ಹೊಡೆದು ದುರ್ಗಾ ಪರಮೇಶ್ವರಿ ದೇವಸ್ಥಾನದ ಹತ್ತಿರ ಅದ್ದೂರಿಯಾಗಿ ಮಾಡಲಾಗುತ್ತದೆ. ಇಲ್ಲಿನ ಮಂಠೇಸ್ವಾಮಿ ಮಠದಲ್ಲಿ ಸಿದ್ದಪ್ಪಾಜಿ ಸೇವೆ ಮತ್ತು ಚಂದ್ರ ಮಂಡಲವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ. ಎಲ್ಲ ಹಬ್ಬಗಳು ಊರಿನ ಯಜಮಾನರ ಮುಂದಾಳತ್ವದಲ್ಲಿ ನಡೆಯುತ್ತದೆ, ಇಂದಿಗೂ ನ್ಯಾಯ ಪಂಚಾಯಿತಿ ಗ್ರಾಮದಲ್ಲಿ ನಡೆಯುವುದು ವಿಶೇಷ.
ಗ್ರಾಮದೇವತೆ ಚೌಡೇಶ್ವರಿ ರಥೋತ್ಸವ ಹಾಗೂ ಚಾಮುಂಡೇಶ್ವರಿ ಕರಗ ಈ ಗ್ರಾಮದ ಪ್ರಮುಖ ವಿಶೇಷ. ರಥೋತ್ಸವಕ್ಕೂ ಮುನ್ನ ಮಾಳಗಾಳಿನ ಯದುವಂಶಸ್ಥರು ಬಂಡಿ ಸೇವೆ ಸಲ್ಲಿಸುತ್ತಾರೆ. ಕರಗ ಮಹೋತ್ಸವದಲ್ಲಿ ವೀರಮಕ್ಕಳು (ಗಂಗಾಮತಸ್ಥರು) ತಲೆಮೇಲೆ ಕಾಯಿ ಒಡೆದುಕೊಳ್ಳುವ ಪವಾಡ ನಡೆಸಿಕೊಡುತ್ತಾರೆ. ಇಂದಿಗೂ ಭಜನೆ ಕಾರ್ಯಕ್ರಮ ನಡೆಯುತ್ತದೆ. ಈ ಗ್ರಾಮ ಶೈಕ್ಷಣಿಕವಾಗಿಯೂ ಛಾಪು ಮೂಡಿಸಿದ್ದು, ಇತ್ತೀಚಿಗೆ ಗ್ರಾಮದ ಯುವತಿ ದಾಮಿನಿ ದಾಸ್ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಎಎಸ್ ಅಧಿಕಾರಿಯಾಗಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.