

ಯಾದಗಿರಿ: ಮಹಾರಾಷ್ಟ್ರದಲ್ಲಿ ವಿಚಾರವಾದಿ ಡಾ. ಆನಂದ ತೇಲ್ತುಂಬೆ ಹಾಗೂ ಇನ್ನಿತರರನ್ನು ಬಂಧಿಸಿದ್ದು ಅಭಿವ್ಯಕ್ತಿ ಸ್ವಾತಂತ್ರೃದ ಮೇಲೆ ನಡೆಸಿದ ದೌರ್ಜನ್ಯವಾಗಿದ್ದು ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೆರಕರ್ ಮಾತನಾಡಿ, ಡಾ. ಆನಂದ್ ಪ್ರಖರ ವಿಚಾರವಾದಿಗಳಾಗಿದ್ದು, ಅವರನ್ನು ಡಾ.ಅಂಬೇಡ್ಕರ್ ಜಯಂತಿ ದಿನದಂದೇ ಬಂಧಿಸಿ ಇಲ್ಲಿಗೆ ಒಂದು ತಿಂಗಳಾಗಿದೆ. ತೇಲ್ತುಂಬೆ ದೇಶದ ಪ್ರಮುಖ ವಿದ್ವಾಂಸರಾಗಿದ್ದು, ಲೋಕಚಿಂತಕ, ಮಾನವ ಹಕ್ಕುಗಳ ಸಕ್ರಿಯ ಪ್ರತಿಪಾದಕರಾಗಿದ್ದಾರೆ. ಅವರು ಒಬ್ಬ ನ್ಯಾಯದ ರಾಷ್ಟ್ರೀಯ ಸಂಕೇತವಾಗಿದ್ದಾರೆ ಎಂದು ಹೇಳಿದರು.
ಭಾರತದಲ್ಲಿ ಡೇಟಾ ಅನಾಲಿಸಿಸ್ ಆರಂಭಿಸಿದ ಪ್ರಮುಖರರಲ್ಲಿ ಇವರು ಒಬ್ಬರು. ಬಂಧನ ವೇಳೆಯಲ್ಲಿ ಗೋವಾ ಇನ್ಸಿಟಿಟ್ಯೂಟ್ ಆಫ್ ಅನಾಲಿಟೆಕ್ಸ್ ನಲ್ಲಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿದ್ದರು. ಇಂತಹ ವ್ಯಕ್ತಿಯನ್ನು ದುರುದ್ದೇಶಪೂರ್ವಕವಾಗಿ ಎನ್ಐಎಯಿಂದ ಬಂಧಿಸಲಾಗಿದ್ದು ಕೂಡಲೇ ಅವರನ್ನು ಬಿಡಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಗೋಪಾಲ ತೆಳಗೇರಿ, ಸೈದಪ್ಪ ಕೂಲೂರು, ಮಲ್ಲಿನಾಥ ಸುಂಗಲಕರ್, ಶಿವಕುಮಾರ ಕುರಕುಂಬಳ, ಸಂಪತ್ ಚಿನ್ನಾಕಾರ, ವಸಂತ ಸುಂಗಲಕರ್ ಇದ್ದರು.