

ಶಿವಮೊಗ್ಗ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಅದಕ್ಕೆ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆಯೇ ಸಾಕ್ಷಿಯಾಗಿದೆ. ಪರಿಶಿಷ್ಟ ಪಂಗಡದವರಿಗೆ ಸಿಗಬೇಕಿದ್ದ ಸೌಲಭ್ಯಗಳ ಅನ್ಯರ ಪಾಲಾಗಿವೆ. ನಿಗಮದಲ್ಲಿ ನಡೆದಿರುವ ಭಾರೀ ಅವ್ಯವಹಾರವನ್ನು ಬಯಲಿಗೆ ಎಳೆಯಬೇಕು. ಕೋಟಿ ಕೋಟಿ ಹಣ ಲೂಟಿ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಕರಣವನ್ನು ಸಿಐಡಿಗೆ ವಹಿಸಿದೆ. 80-85 ಕೋಟಿ ರೂ. ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಲ್ಲಿ ಇಲಾಖೆ ಸಚಿವರು, ಮೇಲಧಿಕಾರಿಗಳೂ ಶಾಮೀಲಾಗಿದ್ದು ಎಲ್ಲರ ತಲೆದಂಡವಾಗಬೇಕು. ತಕ್ಷಣವೇ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕಾಗಿತ್ತು. ಆದರೆ ಸಿಬಿಐಗೆ ಕೊಡಲು ಕಾಂಗ್ರೆಸ್‌ಗೆ ಭಯ ಕಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅಧಿಕಾರಿ ಆತ್ಮಹತ್ಯೆಗೆ ನ್ಯಾಯ ಕೊಡಿಸಿ ಎಂದು ಕೇಳುವ ದುಸ್ಥಿತಿ ಬಂದಿದೆ. ಸರ್ಕಾರಕ್ಕೆ ಜೀವ ಇದ್ದರೆ ಕೂಡಲೇ ಸಚಿವ ನಾಗೇಂದ್ರ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಇಂತಹದ್ದೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿಗೇ ಒಂದು ನ್ಯಾಯ, ಕಾಂಗ್ರೆಸ್‌ಗೆ ಒಂದು ನ್ಯಾಯವಾ ಎಂದು ಪ್ರಶ್ನಿಸಿದ ಅವರು, ಸಚಿವ ನಾಗೇಂದ್ರ ರಾಜೀನಾಮೆ ಕೊಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಹೋರಾಟ ಮಾಡುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಮಾಜಿ ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಮಂಜುನಾಥ್, ಎಸ್.ದತ್ತಾತ್ರಿ, ಮೋಹನ್ ರೆಡ್ಡಿ, ಸುರೇಖಾ ಮುರುಳೀಧರ್, ದರ್ಶನ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.