

ಉಡುಪಿ : ಗೋವಾ ಮಾದರಿಯಲ್ಲಿ ಕರ್ನಾಟಕ ಕರಾವಳಿಯಲ್ಲಿಯೂ ಸಿಆರ್‌ಜಡ್ ವಿನಾಯಿತಿ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಜಿಲ್ಲಾಡಳಿತ, ಮಲ್ಪೆ ಅಭಿವೃದ್ಧಿ ಸಮಿತಿ ವತಿಯಿಂದ ಮಲ್ಪೆ ಸೀ-ವಾಕ್ ಬಳಿ ಬಯಲು ರಂಗಮಂದಿರ ಹಾಗೂ ಉದ್ಯಾನವನ ಉದ್ಘಾಟಿಸಿದ ಅವರು, ಸಿಆರ್‌ಜಡ್ ವಿನಾಯಿತಿಯಿಂದಾಗಿ ಗೋವಾ ಕಡಲತೀರ ಪ್ರವಾಸೋದ್ಯಮ ಅಭಿವೃದ್ಧಿಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಅದೇ ಮಾದರಿಯಲ್ಲಿ ಅಭಿವೃದ್ಧಿಗೆ ರಾಜ್ಯದಲ್ಲಿ ಸಿಆರ್‌ಜಡ್‌ನಿಂದಾಗಿ ಸಮಸ್ಯೆಯಾಗಿದೆ. ಈಗಿನ 500 ಮೀಟರ್ ನಿಯಮವನ್ನು 50 ಮೀ.ಗೆ ಇಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕರಡು ಸಿದ್ಧಪಡಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ವಿನಾಯಿತಿ ಸಿಗಲಿದೆ. ಈ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ಬೀಚ್ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ನಗರಸಭೆ ಸದಸ್ಯೆ ಎಡ್ಲಿನ್ ಕರ್ಕಡ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕರಾವಳಿ ಕಾವಲುಪಡೆ ಪೊಲೀಸ್ ಅಧೀಕ್ಷಕ ಚೇತನ್.ಆರ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಸ್ತಾವಿಸಿದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ನಿರೂಪಿಸಿದರು. ನಿರ್ಮಿತಿ ಯೋಜನಾ ನಿರ್ದೇಶಕ ಅರುಣ್ ವಂದಿಸಿದರು.
ಮರೀನಾ ಯೋಜನೆಗೆ ಡಿಪಿಆರ್!: ಮಲ್ಪೆ ಪಡುಕೆರೆಯಲ್ಲಿ ಮರೀನಾ (ಅಂತಾರಾಷ್ಟ್ರೀಯ ಪ್ರವಾಸಿ ಹಡಗು ತಂಗುದಾಣ) ಯೋಜನೆ ಡಿಪಿಆರ್ ತಯಾರಿಸಲು ಒಂದು ಕೋಟಿ ರೂ. ಅನುದಾನ ಶೀಘ್ರ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು. ಯೋಜನೆಗೆ ಪೂರಕವಾದ ಸ್ಥಳ ಮಲ್ಪೆಯಾಗಿದ್ದು, ಒಂದು ವೇಳೆ ಮರೀನ ಯೋಜನೆ ಯಶಸ್ವಿಯಾಗಿ ರೂಪುಗೊಂಡಲ್ಲಿ ರಾಜ್ಯಕ್ಕೆ ವಾರ್ಷಿಕ 4ರಿಂದ 5 ಸಾವಿರ ಕೋಟಿ ರೂ. ಆದಾಯ ಸಿಗಲಿದೆ. ಉಡುಪಿ ಜಿಲ್ಲೆಯ ಆರ್ಥಿಕತೆಯ ಮೇಲೂ ಇದು ಸಕರಾತ್ಮಕ ಪರಿಣಾಮ ಬೀರಲಿದೆ ಎಂದರು.
ದ್ರವರೂಪದ ಆಮ್ಲಜನಕ ಸ್ಥಾವರ ಉದ್ಘಾಟನೆ:
ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗಿರುವ ದ್ರವರೂಪದ ಆಮ್ಲಜನಕದ ಸ್ಥಾವರ (ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್)ವನ್ನು ಸಚಿವ ಬೊಮ್ಮಾಯಿ ಉದ್ಘಾಟಿಸಿದರು. ಆರೋಗ್ಯ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸ್ಥಾವರ 660 ಜಂಬೋ ಸಿಲಿಂಡರ್ (6 ಸಾವಿರ ಲೀಟರ್) ಸಾಮರ್ಥ್ಯ ಹೊಂದಿದ್ದು, ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಆವಶ್ಯಕತೆ ಇದ್ದಾಗ ಈ ಘಟಕದಿಂದಲೇ ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ತಗ್ಗಿಸುವಲ್ಲಿ ಈ ಘಟಕ ಪ್ರಮುಖ ಪಾತ್ರ ವಹಿಸಿದೆ. ಇದೇ ಸಂದರ್ಭ ಮಾತನಾಡಿದ ಸಚಿವರು, ಜಿಲ್ಲಾಸ್ಪತ್ರೆಯನ್ನು 150 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, 20 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಬಿಡುವಿಲ್ಲದ ಕಾರ್ಯಕ್ರಮ: ಮಂಗಳೂರಿನ ಪಣಂಬೂರು ಬಳಿ ಪೊಲೀಸ್ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ 112 ಮನೆಗಳ ಸಂಕೀರ್ಣವನ್ನು ಗುರುವಾರ ಬೆಳಗ್ಗೆ ಉದ್ಘಾಟಿಸಿದ ಸಚಿವರು ಉಡುಪಿಯಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಉಡುಪಿ ಕೃಷ್ಣ ಮಠಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದರು. ಉಡುಪಿ ನಗರದ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ, ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ಸ್ಥಳ ಪರಿಶೀಲನೆ, ಮಣಿಪಾಲ ಬಿಸಿಎಂ ಹಾಸ್ಟೆಲ್ ಉದ್ಘಾಟನೆ, ಮಲ್ಪೆ ಸೀವಾಕ್ ಕಲಾಕೃತಿಗಳ ಉದ್ಘಾಟನೆ ನಡೆಸಿದರು.
ಪೊಲೀಸರಿಗೆ 11 ಸಾವಿರ ಮನೆ ನಿರ್ಮಾಣ
ಮಂಗಳೂರು: ರಾಜ್ಯದಲ್ಲಿ ಮುಂದಿನ ಐದು ವರ್ಷ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿಗೆ ‘ಪೊಲೀಸ್ ಗೃಹ 2025’ ಯೋಜನೆಯಡಿ 11,000 ಮನೆಗಳ ನಿರ್ಮಾಣದ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ ಮಂಜೂರಾತಿ ನೀಡಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ನಗರದ ಪಣಂಬೂರು ಬಳಿ ಪೊಲೀಸ್ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ 112 ಮನೆಗಳ ಸಂಕೀರ್ಣ ಉದ್ಘಾಟಿಸಿ ಅವರು ಮಾತನಾಡಿ, ಹೊಸ ಯೋಜನೆ ಪೂರ್ಣವಾದಾಗ ಒಟ್ಟು ಶೇ.60ರಷ್ಟು ಪೊಲೀಸ್ ಸಿಬ್ಬಂದಿಗೆ ಮನೆ ಸೌಕರ್ಯ ದೊರೆಯಲಿದೆ. ಜನವರಿಯಿಂದ ಈ ಕಾರ್ಯ ಆರಂಭವಾಗಲಿದೆ. ದ.ಕ. ಜಿಲ್ಲೆಯಲ್ಲಿ 192 ಗೃಹ ನಿರ್ಮಾಣದ ಬೇಡಿಕೆ ಬಂದಿದ್ದು, 100 ಮನೆಗಳಿಗೆ ಮಂಜೂರಾತಿ ನೀಡಲಾಗುವುದು ಎಂದರು.
ಎಫ್‌ಎಸ್‌ಎಲ್ ಪ್ರಯೋಗಾಲಯ ವಿಸ್ತರಣೆ: ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ವಶಪಡಿಸಿಕೊಂಡಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಳೆದ 10 ತಿಂಗಳಲ್ಲಿ ಮಾದಕವಸ್ತುಗಳನ್ನು ವಶಪಡಿಸಲಾಗಿದೆ, ಶಾಲಾ ಕಾಲೇಜು ಮಕ್ಕಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು. ಸೈಬರ್ ಕ್ರೈಂ, ಬ್ಯಾಂಕ್ ಮೋಸದ ಜಾಲ ಬೇಧಿಸಲು ಐಟಿ ತಜ್ಞರನ್ನು ಪೊಲೀಸ್ ಇಲಾಖೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ನಾರ್ಕೊಟಿಕ್ಸ್ ಅನಾಲಿಸಿಸ್ ಒಳಗೊಂಡ ಎಫ್‌ಎಸ್‌ಎಲ್ ಪ್ರಯೋಗಾಲದ ಉದ್ಘಾಟನೆಯಾಗಿರುವಂತೆಯೇ, ಪ್ರತಿಯೊಂದು ಪೊಲೀಸ್ ವಲಯದಲ್ಲಿರುವ ಮಾದರಿ ಎಫ್‌ಎಸ್‌ಎಲ್ ಪ್ರಯೋಗಾಲಯಗಳನ್ನು ಉನ್ನತೀಕರಿಸಲು ಹಾಗೂ ಮತ್ತೆ ಐದು ವಲಯಗಳಲ್ಲಿ ಹೊಸತಾಗಿ ಪ್ರಯೋಗಾಲಯ ತೆರೆಯಲಾಗುವುದು ಎಂದರು.
ಕೋಸ್ಟಲ್ ಪೊಲೀಸ್‌ಗೆ ಸ್ಪೀಡ್‌ಬೋಟ್: ಮುಂದಿನ ಬಜೆಟ್‌ನಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ನಗರಗಳಲ್ಲಿ ಸಂಚಾರಿ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕರಾವಳಿ ಪೊಲೀಸ್ ಪಡೆಯನ್ನು ಬಲಪಡಿಸುವ ನಿಟ್ಟಿನಲ್ಲಿ 2021-22ರ ಸಾಲಿನಲ್ಲಿ ಹೈಸ್ಪೀಡ್ ಬೋಡ್‌ಗಳನ್ನು ಒದಗಿಸಲಾಗುವುದು. ಕರಾವಳಿಯ ಸಮುದ್ರಗಳಲ್ಲಿ 11 ನಾಟಿಕಲ್ ವ್ಯಾಪ್ತಿಯವರೆಗೆ ಪೊಲೀಸರಿಂದಲೇ ರಕ್ಷಣಾ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.