ಮಲ್ಪೆ ಬಂದರು ತುಂಬಿದೆ ಕೆಸರು, ಮೂರು ವರ್ಷದಿಂದ ನಡೆದಿಲ್ಲ ಡ್ರೆಜ್ಜಿಂಗ್

Malpe port
Published on

ಉಡುಪಿ: ಸಾವಿರಾರು ಮೀನುಗಾರಿಕಾ ಬೋಟುಗಳಿರುವ ಮಲ್ಪೆ ಬಂದರಿನಲ್ಲಿ ಕೆಸರು- ಹೂಳು ತುಂಬಿಕೊಂಡು ಮೀನುಗಾರಿಕಾ ಚಟುವಟಿಕೆ ಅಡಚಣೆಯಾಗುತ್ತಿದೆ. ಜಿಲ್ಲೆಯ ಸಾವಿರಾರು ಬೋಟುಗಳು ಲಂಗರು ಹಾಕುವ ಮಲ್ಪೆ ಬಂದರಿನಲ್ಲಿ ಹೂಳು ಸಮಸ್ಯೆ ಗಂಭೀರವಾಗಿರುವುದು ಮೀನುಗಾರರಿಗೆ ದೊಡ್ಡ ತಲೆನೋವಾಗಿ ಬಾಧಿಸಿದೆ.

ಮೂರ್ನಾಲ್ಕು ವರ್ಷದಿಂದ ಹೂಳು ತೆಗೆಯದೇ ಸಾಕಷ್ಟು ಪ್ರಮಾಣದಲ್ಲಿ ಕೆಸರು, ಕಸ ತುಂಬಿಕೊಂಡಿದೆ. ಮೂರು ವರ್ಷದ ಹಿಂದೆ ಮುಂಬೈನಿಂದ ಯಂತ್ರವನ್ನು ತರಿಸಿ ಶೇ.50ರಷ್ಟು ಡ್ರೆಜ್ಜಿಂಗ್ ನಡೆಸಲಾಗಿತ್ತು. ಡ್ರೆಜ್ಜಿಂಗ್ ಪ್ರಕ್ರಿಯೆ ಮತ್ತೆ ಪ್ರಾರಂಭಿಸಲಾಗುವುದು ಎಂಬ ಭರವಸೆ ಇದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಮೀನುಗಾರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಳ ಸಮುದ್ರದ ಟ್ರಾಲ್ ಬೋಟ್, ಪರ್ಸೀನ್ ಬೋಟ್ ಹಾಗೂ ಸಮುದ್ರ ತೀರದಲ್ಲಿ ಟ್ರಾಲ್ ಮಾಡುವ ಬೋಟ್ ಸೇರಿದಂತೆ ಜಿಲ್ಲೆಯ ಮಲ್ಪೆ ಹಾಗೂ ಗಂಗೊಳ್ಳಿ ಬಂದರು ವ್ಯಾಪ್ತಿಯಲ್ಲಿ ಒಟ್ಟು 2500ಕ್ಕೂ ಹೆಚ್ಚು ಬೋಟುಗಳು ಮಲ್ಪೆ ಬಂದರು ಕೇಂದ್ರಿಕರಿಸಿ ಮೀನುಗಾರಿಕೆ ಚಟುವಟಿಕೆ ನಡೆಸುತ್ತಿವೆ. ಪ್ರತಿವರ್ಷ ಬೋಟುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಹೊರತು ಮೀನಿನ ಇಳುವರಿ ಹೆಚ್ಚಳವಾಗುತ್ತಿಲ್ಲ. ಮತ್ತೊಂದೆಡೆ ಹೂಳು ತುಂಬಿದ ಬಂದರಿನಲ್ಲಿ ಬೋಟುಗಳು ಲಂಗರು ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರರ ಹೇಳುತ್ತಾರೆ.

ಆಳ ಕಡಿಮೆಯಾಗುತ್ತಿದೆ: ಬಂದರಿನಲ್ಲಿ ಕೆಸರಿನ ಪ್ರಮಾಣ ಹೆಚ್ಚಳವಾಗುತ್ತಿದೆ ಪರಿಣಾಮ ಬೋಟುಗಳಿಗೆ ಹಾನಿ ಸಂಭವಿಸುತ್ತಿದೆ. ಬೋಟ್‌ನ ಫ್ಯಾನ್, ಇಂಟರ್‌ಕೂಲರ್, ರೇಡಿಯೇಟರ್‌ಗಳಿಗೆ ಹಾನಿಯಾಗುತ್ತಿದೆ. ಈ ಹಿಂದೆ 2 ವರ್ಷಕ್ಕೆ ಸರ್ವಿಸ್ ಮಾಡುತ್ತಿದ್ದರೆ ಪ್ರಸ್ತುತ ಕೆಸರಿನ ಸಮಸ್ಯೆಯಿಂದಾಗಿ 6 ತಿಂಗಳು, ವರ್ಷಕ್ಕೊಮ್ಮೆ ಸರ್ವೀಸ್, ಬಿಡಿಭಾಗಗಳ ರಿಪೇರಿ ಕೆಲಸಗಳು ಬರುತ್ತಿವೆ ಎಂದು ಬೋಟಿನ ಮಾಲೀಕರು ಅಳಲುತೋಡಿಕೊಳ್ಳುತ್ತಾರೆ.

ಕೆಸರು ಅಪಾಯಕಾರಿ: ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ವೇಗದ ಸ್ವರೂಪದಲ್ಲಿರುತ್ತದೆ, ಮೀನುಗಾರರು ಸದಾ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಾರೆ. ಬಂದರಿನಲ್ಲಿ ನಿಲ್ಲಿಸುವ ಬೋಟುಗಳಿಂದ ಬೋಟಿಗೆ ದಾಟಿಕೊಂಡು ಬಂದರು ಕಟ್ಟೆಗೆ ಬರಬೇಕು. ಬಲೆ ಜೋಡಿಸುವಾಗ, ಸಾಮಗ್ರಿ ಸಾಗಿಸುವಾಗ ಆಯತಪ್ಪಿ, ಆಕಸ್ಮಿಕವಾಗಿ ನೀರಿಗೆ ಬಿದ್ದರೆ ಅಪಾಯ ನಿಶ್ಚಿತ. ಎಷ್ಟು ನುರಿತ ಈಜುಗಾರನಾಗಿದ್ದರೂ, ಬಂದರು ನೀರಿನಲ್ಲಿ ಕೆಸರು ತುಂಬಿರುವುದರಿಂದ ಕೈಕಾಲು, ಆಡಿಸಲು ಸಾಧ್ಯವಾಗದೇ ಮೇಲೆದ್ದು ಈಜುವುದು ಅಸಾಧ್ಯ ಎನ್ನುತ್ತಾರೆ ಮೀನುಗಾರರು.

ಮಲ್ಪೆ ಬಂದರಿನಲ್ಲಿ ಕೆಸರು-ಹೂಳು ತುಂಬಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇಲ್ಲಿ ಡ್ರೆಜ್ಜಿಂಗ್ ನಡೆದಿಲ್ಲ. ಬೋಟುಗಳ ಚಲನವಲನ ಕಷ್ಟವಾಗುತ್ತಿದ್ದು, ಬೋಟುಗಳ ತಳಭಾಗಕ್ಕೆ ಇದರಿಂದ ಹಾನಿಯಾಗುತ್ತಿದೆ. ಶಾಸಕರಿಗೆ ಈ ಬಗ್ಗೆ ಮನವಿ ಮಾಡಿದ್ದು, ಡ್ರೆಜ್ಜಿಂಗ್ ಕಾಮಗಾರಿ ವ್ಯವಸ್ಥೆ ಶೀಘ್ರ ಮಾಡುವುದಾಗಿ ಭರವಸೆ ನೀಡಿದ್ದಾರೆ. -ಕೃಷ್ಣ ಸುವರ್ಣ, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net