

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನ ಅವ್ಯವಸ್ಥೆಯ ಬಗ್ಗೆ ನಿರಂತರವಾಗಿ ದಿನಪತ್ರಿಕೆ ಹಾಗೂ ವಿವಿಧ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿದ್ದರೂ ಮೀನುಗಾರಿಕೆ ಇಲಾಖೆ ನಿಯಮ ಬಾಹಿರವಾಗಿ ಗುತ್ತಿಗೆ ಅವಧಿ ವಿಸ್ತರಿಸುವ ಮೂಲಕ ಮೀನುಗಾರರಿಗೆ ಅನ್ಯಾಯ ಮಾಡಲಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೀನುಗಾರಿಕೆ ಇಲಾಖೆ ನಿರ್ದೇಶಕರು ತಕ್ಷಣ ಮಲ್ಪೆ ಬಂದರಿಗೆ ಆಗಮಿಸಿ ಮೀನುಗಾರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಗುತ್ತಿಗೆ ಅವಧಿ ವಿಸ್ತರಣೆ ಮಾಡಿದ ಆದೇಶ ಹಿಂಪಡೆದು, ಹೊಸ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಮಲ್ಪೆ ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಮೀನುಗಾರಿಕೆ ಚಟುವಟಿಕೆಗೆ ಸಂಬಂಧಿಸಿದ ನಿವೇಶನಗಳನ್ನು ಖಾಸಗಿ ವ್ಯಕ್ತಿಗಳಿಗೆ ಲೀಸ್ ನೀಡಲು ಮುಂದಾಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಇಲಾಖೆ ತಕ್ಷಣ ಈ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಸೂಚನೆ ನೀಡಿದರು.
ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮಾತನಾಡಿ, ಈ ಹಿಂದೆ ಮಲ್ಪೆ ಬಂದರು ನಿರ್ವಹಣೆಯ ಗುತ್ತಿಗೆ ಪಡೆದ ಖಾಸಗಿ ವ್ಯಕ್ತಿ ಬಂದರು ಸಮರ್ಪಕ ನಿರ್ವಹಣೆಯಲ್ಲಿ ಸಂಪೂರ್ಣ ರ್ನಿಲಕ್ಷ್ಯ ವಹಿಸಿದ್ದು ಹಾಗೂ ಟೆಂಡರ್ ನಿಯಮಾವಳಿಯನ್ನು ಪಾಲಿಸದೆ ಸಿಸಿಟಿವಿ, ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಬಂದರು ಸ್ವಚ್ಛತೆ ಬಗ್ಗೆ ಯಾವುದೇ ಮುತುವರ್ಜಿ ವಹಿಸಿಲ್ಲ. ಮಲ್ಪೆ ಬಂದರಿನಲ್ಲಿ ಸೂಕ್ತ ಭದ್ರತಾ ಸಿಬ್ಬಂದಿ ಹಾಗೂ ಸಿಸಿಟಿವಿ ಕೊರತೆಯ ಪರಿಣಾಮ ನಿರಂತರವಾಗಿ ಮೀನು ಹಾಗೂ ಮೀನುಗಾರಿಕಾ ಸಲಕರಣೆಗಳ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಇಂತಹ ಗಂಭೀರ ಸಮಸ್ಯೆಗಳನ್ನು ಪರಿಗಣಿಸದೆ ಏಕಪಕ್ಷೀಯವಾಗಿ ಅದೇ ವ್ಯಕ್ತಿಗೆ ನಿಯಮಬಾಹಿರವಾಗಿ ಮೀನುಗಾರಿಕೆ ಇಲಾಖೆ ಗುತ್ತಿಗೆಯನ್ನು ವಿಸ್ತರಿಸಿದೆ ಎಂದು ಆರೋಪಿಸಿದರು.
ನಿರ್ವಹಣಾ ವೆಚ್ಚ ಪಾವತಿಸುವುದಿಲ್ಲ
ಮೀನುಗಾರಿಕಾ ಇಲಾಖೆ ತಕ್ಷಣ ಎರಡು ವರ್ಷಗಳಿಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸಿರುವ ಆದೇಶವನ್ನು ತಕ್ಷಣ ರದ್ದುಮಾಡಿ, ಹೊಸತಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಇಲ್ಲದಿದ್ದರೆ ಮೇ 10 ರ ಬಳಿಕ ಮಲ್ಪೆ ಮೀನುಗಾರ ಸಂಘದ ವತಿಯಿಂದ ಯಾವುದೇ ನಿರ್ವಹಣಾ ವೆಚ್ಚವನ್ನು ಪಾವತಿಸುವುದಿಲ್ಲ. ಈ ಬಗ್ಗೆ ಈಗಾಗಲೇ ತೀಮಾರ್ನ ಕೈಗೊಳ್ಳಲಾಗಿದೆ ಎಂದರು. ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್, ಸಹಾಯಕ ನಿರ್ದೇಶಕಿ ಸವಿತಾ ಖಾದ್ರಿ, ಮಲ್ಪೆ ಮೀನುಗಾರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.