ಮಲ್ಪೆ- ಮೊಳಕಾಲ್ಮೂರು ಹೆದ್ದಾರಿ ವಿಸ್ತರಣೆ

State Highway, Extension, Quick
Published on

ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಹೇಳಿಕೆ I ಜಗಳೂರಲ್ಲಿ ಅಧಿಕಾರಿಗಳ ಸಭೆ

ಜಗಳೂರು: ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ 65 ಹಾದು ಹೋಗಿರುವುದರಿಂದ ಜಗಳೂರು ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಅನಿವಾರ್ಯವಾಗಿದೆ. ಅತಿ ಶೀಘ್ರವೇ ಕಾನೂನು ಪ್ರಕಾರ ದೃಢ ನಿಶ್ಚಯದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ರಸ್ತೆ ವಿಸ್ತರಣೆ ನಿಮಿತ್ತ ದಾವಣಗೆರೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಥಮ ಸಭೆ ಮಾಡಲಾಗಿತ್ತು. ಅದರಂತೆ ಲೋಕೋಪಯೋಗಿ ಇಲಾಖೆಯಿಂದ ಶುಕ್ರವಾರ, ಶನಿವಾರ ಮಾರ್ಕಿಂಗ್ ಮಾಡಲಾಗಿದೆ. ರಸ್ತೆಯ ಗುಣಮಟ್ಟ, ಅಗಲ ಮತ್ತಿತರ ಅಂಶ ನೋಡಲು ಅಪೆಕ್ಸ್ ಸಮಿತಿ ಇರುತ್ತದೆ. ಅದರ ಪ್ರಕಾರ ಯಾವುದೇ ರಾಜ್ಯ ಹೆದ್ದಾರಿ ಬೌಂಡರಿಯಿಂದ ಆರು ಮೀಟರ್ ಇರಬೇಕು. ರಸ್ತೆಯ ಮಧ್ಯಭಾಗದಿಂದ 21 ಮೀಟರ್ ಇರಬೇಕು ಎನ್ನುವುದು ಕಡ್ಡಾಯವಾಗಿದೆ. ಅದರಂತೆ ಮಹಾ ಯೋಜನೆ ರೂಪಿಸಲಾಗಿದೆ ಎಂದರು.

ರಸ್ತೆಯಲ್ಲಿರುವ 52 ವಿದ್ಯುತ್ ಕಂಬಗಳು, 7 ವಿದ್ಯುತ್ ಪರಿವರ್ತಕಗಳು, 17 ಪವರ್ ವಿದ್ಯುತ್ ಕಂಬಗಳು, ದೂರಸಂಪರ್ಕ ಇಲಾಖೆಗೆ ಸಂಬಂಧಿತ ಪೈಪ್‌ಲೈನ್, ವೈರ್‌ಗಳಿದ್ದರೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅನಧಿಕೃತ ಕಟ್ಟಡ, ರಾಜಕಾಲುವೆ ತೆರವು: ಪಟ್ಟಣದ ಮುಖ್ಯ ರಸ್ತೆಯುದ್ದಕ್ಕೂ ಒತ್ತುವರಿ ಆಗಿದೆ. ಮಳಿಗೆ ಕಟ್ಟಡಗಳು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ಮಾಡಿ ಕೋರ್ಟ್ ಗಮನಕ್ಕೆ ತರಲಾಗುವುದು. ಪಟ್ಟಣದಲ್ಲಿ ಕಾಲುದಾರಿ, ರಾಜಕಾಲುವೆ ಎಷ್ಟಿವೆ. ರಾಜ್ಯ ಕಾಲುವೆಯಿಂದ 30 ಮೀಟರ್ ಒಳಗೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿ, ಪಟ್ಟಣದಲ್ಲಿ ನಡೆದ ಅಪಘಾತದಲ್ಲಿ ಎರಡು ಮುಗ್ಧ ಜೀವಗಳು ಬಲಿಯಾಗಿದ್ದು ಮನಸ್ಸಿಗೆ ತುಂಬ ಬೇಸರ ತಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ, ಎಸ್ಪಿ ಅವರ ಗಮನಕ್ಕೂ ಬಂದಿದೆ. ಇಂತಹ ಅವಘಡಗಳು ಮುಂದಾಗಬಾರದು ಎಂಬ ಉದ್ದೇಶದಿಂದ ವಿಳಂಬ ಮಾಡದೆ ಜಿಲ್ಲಾಧಿಕಾರಿ ಮಾರ್ಕಿಂಗ್ ಮಾಡಲು ಆದೇಶಿಸಿದ್ದಾರೆ ಎಂದರು.

ಸಂಘಟನೆ, ಸಾರ್ವಜನಿಕರ ಸಹಕಾರ ಅಗತ್ಯ: ಶಾಸಕನಾದ ನಂತರ ಪಟ್ಟಣದ ಮುಖ್ಯ ರಸ್ತೆ ವಿಸ್ತರಿಸುವುದಾಗಿ ಭರವಸೆ ನೀಡಿದ್ದೆ. ಅದರಂತೆ ಈಗಾಗಲೇ ಕಾರ್ಯ ಆರಂಭವಾಗಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಪ್ರಗತಿಪರ ಸಂಘಟನೆ, ವಕೀಲರು, ಮಾಧ್ಯಮದವರ ಸಹಕಾರ ತುಂಬ ಮುಖ್ಯವಾಗಿದೆ. ಅದರಂತೆ ಎಲ್ಲರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಯಾವುದೇ ಸಂದೇಹ ಬೇಡ. ಯಾರನ್ನೂ ಉಳಿಸುವಂತಹ ಕೆಲಸ ಮಾಡುವುದಿಲ್ಲ. ಸತ್ಯದಪರ, ಕಾನೂನಿನ ಚೌಕಟ್ಟಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ಎಎಸ್ಪಿ ಮಂಜುನಾಥ್, ಎಡಿಸಿ ಲೋಕೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದಿಕ್ ಉಲ್ಲಾ, ಬೆಸ್ಕಾಂ ಎಇಇ ಸುಧಾಮಣಿ, ಜಿಪಂ ಎಇಇ ಶಿವಮೂರ್ತಿ, ಪಿಐ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net