

ಉಡುಪಿ: ಖಳನಾಯಕನ ಪಾತ್ರ ನಿರ್ವಹಿಸಿದ್ದ ನಟ ವಶಿಷ್ಠ ಸಿಂಹ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಲವ್ ಲಿ ಸಿನೆಮಾ ಸೆಟ್ಟೇರಿದ್ದು, ಮಲ್ಪೆ ಪಡುಕೆರೆ ಕಡಲ ತೀರದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಭುವನಸಾ ಕ್ರಿಯೇಶನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನೆಮಾದಲ್ಲಿ ಸಿನೆಮಾಟೋಗ್ರಾಫರ್ ಅಶ್ವಿನ್ ಕೆನಡಿ, ಕಲಾನಿರ್ದೇಶಕ ಪ್ರತಾಪ್, ಸಂಗೀತ ಅನುಪ್, ಸಂಕಲನವನ್ನು ಹರೀಶ್ ಕೊಮ್ಮೆ ಮಾಡಲಿದ್ದಾರೆ. ಈ ಸಿನೆಮಾದಲ್ಲಿ ಹಿರಿಯ ನಟರಾದ ಅಚ್ಯುತ್ ರಾವ್, ಸಾಧುಕೋಕಿಲ, ದತ್ತಣ್ಣ, ಶೋಭ್ ರಾಜ್, ವಂಶಿಕಾ ಆನಂದ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸುತ್ತಿದ್ದಾರೆ. ಖಳನಾಯಕನಾಗಿ ಶೇಖರ್ ಅಭಿನಯಿಸಿದ್ದಾರೆ.
ಪಡುಕೆರೆ ಕಡಲತೀರದಲ್ಲಿ ಸಿನೆಮಾ ಬಗ್ಗೆ ಮಾತನಾಡಿದ ನಾಯಕ ನಟ ವಶಿಷ್ಠ ಸಿಂಹ, ಈ ಚಿತ್ರದಲ್ಲಿ ಜಯ್ ಎಂಬ ಪಾತ್ರವನ್ನು ಮಾಡುತ್ತಿದ್ದೇನೆ. ರೌಡಿಸಂ, ಲವ್, ಫ್ಯಾಮಿಲಿ ಸೆಂಟಿಮೆಂಟ್, ಎಡ್ವೆಂಚರ್, ಥ್ರಿಲ್ ಹೀಗೆ ಎಲ್ಲಾ ಪಾತ್ರಗಳನ್ನು ಈ ಸಿನೆಮಾ ಒಳಗೊಂಡಿದೆ. ನನಗೆ ಹೀರೋ, ವಿಲನ್ ಅಂತೇನಿಲ್ಲ, ನಾನೊಬ್ಬ ಕಲಾವಿದ ಮಾತ್ರ, ವಿಲನ್ ಪಾತ್ರಕ್ಕೆ ಹೆಚ್ಚು ಸ್ವಾತಂತ್ರ್ಯ ಇರುತ್ತದೆ. ಆದ್ದರಿಂದ ನೆಗೆಟಿವ್ ಶೇಡ್ ಪಾತ್ರಗಳೂ ಇಷ್ಟ ಎಂದರು.
ರಜೆ ಕೊಡದ ನಿರ್ದೇಶಕರು!
ನಿರ್ದೇಶಕರು ಕೊರೆಯುವ ಚಳಿಯಲ್ಲಿ ಮಧ್ಯರಾತ್ರಿ ತಮ್ಮನ್ನು ಸಮುದ್ರಕ್ಕೆ ತಳ್ಳಿ ಶೂಟಿಂಗ್ ಮಾಡುತ್ತಿದ್ದಾರೆ. ಮೊನ್ನೆ ಹರಿಪ್ರಿಯ ಜೊತೆಗೆ ಎಂಗೇಜ್ಮೆಂಟ್ಗೆ 2 ದಿನ ಮಾತ್ರ ರಜೆ ನೀಡಿದ್ದರು.ಇನ್ನೆರಡು ದಿನ ರಜೆ ಕೊಡು, ಹಾಯಾಗಿ ಸುತ್ತಾಡಿ ಬರುತ್ತೇನೆ ಎಂದರೂ ಬಿಟ್ಟಿಲ್ಲ ಎಂದು ಲಘ ಆರೋಪ ಮಾಡಿದರು.
ಸೆಟ್ ಅಲ್ಲ ರಿಯಲ್ ಮನೆ ನಿರ್ಮಾಣ
ನಿರ್ಮಾಪಕ ರವೀಂದ್ರ ಮಾತನಾಡಿ, ದಕ್ಷಿಣ ಭಾರತದ ಸಿನೆಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಸಿನೆಮಾಕ್ಕಾಗಿ 1.50 ಕೋಟಿ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದೆ. ಪಡುಕೆರೆ ಕಡಲ ತೀರದಲ್ಲಿ 2 ಅಂತಸ್ತಿಕ ಮನೆ ಕಟ್ಟಲಾಗಿದೆ. ಭೂಮಿ ಖರೀದಿಸಿ, ಮನೆ ಕಟ್ಟಿ, ಶೂಟಿಂಗ್ ಮುಗಿದ ಮೇಲೆ ಮಾರಿ ಹೋಗೋಣ ಎಂದು ಕೊಂಡಿದ್ದೆವು. ಆದರೆ ಬೀಚ್‌ನಲ್ಲಿ ಖಾಸಗಿ ಭೂಮಿ ಸಿಕ್ಕಿಲ್ಲ. ಆದರೂ 2 ತಿಂಗಳ ಪರವಾನಿಗೆ ಪಡೆದು ಮನೆ ಕಟ್ಟಿದ್ದೇವೆ. ಇಲ್ಲಿ ಸಿನೆಮಾದ ಶೇ. 20ರಷ್ಟು ಶೂಟಿಂಗ್ ನಡೆಯುತ್ತದೆ. ಆಮೇಲೆ ಕೆಡವುತ್ತೇವೆ. ಬಹುಶಃ ಕನ್ನಡ ಸಿನೆಮಾದಲ್ಲಿ ಸಿನೆಮಾಕ್ಕಾಗಿ ಸೆಟ್ ಹಾಕದೇ, ರಿಯಲ್ ಮನೆ ಕಟ್ಟಿದ್ದು ಇದೇ ಮೊದಲು. ಬೆಂಗಳೂರು ಮತ್ತು ಮಲ್ಪೆಯಲ್ಲಿ ಚಿತ್ರೀಕರಣ ಮುಗಿದ ಬಳಿಕ ಲಂಡನ್‌ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಹೇಳಿದರು. ನಿರ್ದೇಶಕ ಚೇತನ್ ಕೇಶವ್, ನಾಯಕಿ ಸ್ಟಫಿ ಪಟೇಲ್, ಸಹ ನಿರ್ಮಾಪಕ ಬಾಲಕೃಷ್ಣ ಜಿ.ಎನ್ ಉಪಸ್ಥಿತರಿದ್ದರು.