

ಉಡುಪಿ: ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ರಸ್ತೆಯನ್ನು 70 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಭೂಮಿ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ ಪರಿಹಾರ ಮೊತ್ತವನ್ನು 3 ಪಟ್ಟು ಹೆಚ್ಚಳಮಾಡಿದೆ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸ್ಥಳೀಯರು ಸಹಕಾರ ನೀಡಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶುಕ್ರವಾರ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ ಕಲ್ಮಾಡಿ ಬ್ರಿಡ್ಜ್ ಬಳಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡಿದರು.
ಭೂಮಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಸ್ವಲ್ಪ ಮಟ್ಟಿನ ತ್ಯಾಗ ಮಾಡಬೇಕು. ಕೋರ್ಟ್ ವ್ಯಾಜ್ಯಗಳಿಂದ ಯಾರಿಗೂ ಲಾಭವಿಲ್ಲ. ಸರ್ಕಾರಿ ಯೋಜನೆ ವಿಳಂಬವಾಗಬಹುದು ವಿನಾ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಸಹಕರಿಸಿ ಶೀಘ್ರದಲ್ಲಿ ರಸ್ತೆ ಕಾಮಗಾರಿ ಮುಕ್ತಾಯಗೊಳ್ಳಲು ಸಹಕಾರ ನೀಡುವಂತೆ ತಿಳಿಸಿದರು.
ಮೀನುಗಾರಿಕಾ ಬಂದರು ಮತ್ತು ಪ್ರವಾಸಿ ಕ್ಷೇತ್ರವಾದ ಮಲ್ಪೆ ಬೀಚ್ ಇರುವ ಕಾರಣ ಈ ರಸ್ತೆಯಲ್ಲಿ ವಾಹನ ದಟ್ಟಣೆ ಅತ್ಯಧಿಕವಾಗಿದ್ದು, ಕಿರಿದಾದ ರಸ್ತೆಯಿಂದ ಹಲವು ಅಪಘಾತಗಳಿಗೆ ಸಹ ಕಾರಣವಾಗಿತ್ತು. ಪ್ರಸ್ತುತ ಈ ರಸ್ತೆ ವಿಸ್ತರಣೆ ಮೂಲಕ ಬಂದರಿನಲ್ಲಿ ಹೆಚ್ಚಿನ ಅರ್ಥಿಕ ಚಟುವಟಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮಟ್ಟಾರು ರತ್ನಾಕರ ಹೆಗಡೆ, ಸುರೇಶ್ ಶೆಟ್ಟಿ ಗುರ್ಮೆ, ರಾ.ಹೆ. ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಸುಂದರ ಕಲ್ಮಾಡಿ ವಂದಿಸಿದರು.