ಮಲ್ಪೆ ಬಂದರಿನಲ್ಲಿ 3 ಕೋಟಿ ರೂ. ವೆಚ್ಚದ ಹೂಳು ಎತ್ತುವ ಕಾರ್ಯ

udp-5-malpe
Published on

ಉಡುಪಿ: ಮಲ್ಪೆ ಬಂದರಿನಲ್ಲಿ ಹೂಳು ತುಂಬಿದ್ದು, ಬೋಟ್​ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗಾಗಲೇ 3 ಕೋಟಿ ರೂ. ವೆಚ್ಚದಲ್ಲಿ ಹೂಳು ಎತ್ತುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಮಲ್ಪೆ ಮೀನುಗಾರಿಕೆ ಬಂದರಿಗೆ ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್​ ಎಸ್​. ವೈದ್ಯ ಹೇಳಿದರು.

ಸೋಮವಾರ ಮಲ್ಪೆ ಬಂದರಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದ ಅವರು, ಬೋಟುಗಳ ಸುಗಮ ಸಂಚಾರಕ್ಕೆ ಬಂದರಿನಲ್ಲಿ ವರ್ಷಪೂರ್ತಿ ಹೂಳು ಎತ್ತಬೇಕೆಂಬ ಬೇಡಿಕೆ ಇದೆ. ಸರಕಾರ ಖಾಸಗಿ ಸಹಭಾಗಿತ್ವದಲ್ಲಿ ಅಂದರೆ ಪಿ.ಪಿ.ಪಿ ಮಾಡೆಲ್​ನಲ್ಲಿ ಹೂಳು ಎತ್ತುವು ಯಂತ್ರವನ್ನು ಖರೀದಿ ಮಾಡಲು ಚಿಂತನೆ ನಡೆಸಲಾಗಿದೆ. ಮಲ್ಪೆ ಬಂದರನ್ನು ಅವಲೋಕಿಸಿದಾಗ ಬಂದರಿನಲ್ಲಿ ಬೋಟ್​ ನಿಲ್ಲಿಸಲು, ಅವುಗಳನ್ನು ಓಡಿಸಲು ಹಾಗೂ ಅವುಗಳನ್ನು ಎಳೆಯಲು ಸಮಸ್ಯೆ ಇದೆ. ಈ ಸಮಸ್ಯೆಗಳನ್ನು ನಿವಾರಿಸಲು ನೀಲನಕ್ಷೆಯನ್ನು ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

2017-18 ನೇ ಸಾಲಿನಲ್ಲಿ ಬಂದರಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡಲಾಗಿತ್ತು. ಸಿ.ಆರ್​.ಝಡ್​ ಸಮಸ್ಯೆಯಿಂದ ಕಾಮಗಾರಿಗಳನ್ನು ಕೈಗೊಳ್ಳಲು ತಾಂತ್ರಿಕ ಅಡಚಣೆ ಉಂಟಾಗಿತ್ತು. ರಾಜ್ಯದ ಕರಾವಳಿ ಭಾಗದ 320 ಕಿ.ಮೀ ಸಿ.ಆರ್​.ಝಡ್​ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ. ಹೀಗಾಗಿ ಶ್ರೀದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಮಲ್ಪೆ ಬಂದರು ವಿಸ್ತರಣೆ ಹಾಗೂ ಮೀನುಗಾರರಿಂದ ಸೀ- ಆಂಬುಲೆನ್ಸ್​ ವ್ಯವಸ್ಥೆಬೇಕೆಂಬ ಬೇಡಿಕೆ ಇದೆ. ಈ ಬಾರಿಯ ಬಜೆಟ್​ನಲ್ಲಿ ಅನುದಾನ ನೀಡಲಾಗುವುದು. ಮೀನುಗಾರರಿಗೆ ಹಾಗೂ ಮೀನುಗಾರಿಕೆ ಮಹಿಳೆಯರಿಗೆ ಅನುಕೂಲವಾಗುವಂತೆ ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.

ಜಿಲ್ಲೆಯು ಮೀನುಗಾರರ ಸಂಕಷ್ಟ ನಿಧಿಯಲ್ಲಿ ಕಳೆದ 4 ವರ್ಷದಲ್ಲಿ 9 ಕೋಟಿ ರೂ. ಬಾಕಿ ಇತ್ತು. ಈಗಾಗಲೇ 8 ಕೋಟಿ ರೂ. ಹಣವನ್ನು ಸರ್ಕಾರ ಸಂಕಷ್ಟದಲ್ಲಿರುವವರ ಕುಟುಂಬದವರಿಗೆ ವಿತರಣೆ ಮಾಡಿದೆ ಎಂದರು. ಕಳೆದ ಸಾಲಿನಲ್ಲಿ ಸರ್ಕಾರ ಕರ ರಹಿತ ಡಿಸೆಲ್​ ಸಬ್ಸಿಡಿ ಅನುದಾನ 175 ಕೋಟಿ ರೂ. ನೀಡಿತ್ತು. ಈಗಿನ ಸರ್ಕಾರ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ. ನೀಡುತ್ತಿದೆ ಎಂದರು.

ಮೀನುಗಾರರ ಸಂದ ಅಧ್ಯಕ್ಷ ದಯಾನಂದ್​ ಸುವಣ್​, ನಾಗರಾಜ ಸುವರ್ಣ, ರಮೇಶ್​ ಕೋಟ್ಯಾನ್​, ಜಯ ಸಿ . ಕೋಟ್ಯಾನ್​, ಕಾಂಗ್ರೆಸ್​ ಮುಖಂಡ ಪ್ರಸಾದ್​ ರಾಜ್​ ಕಾಂಚನ್​, ಕಿಶೋರ್​ ಸುವರ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net