

ಉಡುಪಿ: ಬೋಟ್ ಮಾಲೀಕರಿಗೆ ಬೋಟ್ನಲ್ಲಿ ಅಳವಡಿಸುವ ಟೈಯರ್ನಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಆಗುವುದರಿಂದ ಟೈಯರ್ ಬದಲಿಗೆ ರೋಪ್ (ಹಗ್ಗ)ಅಳವಡಿಸಬೇಕು. ಬೋಟ್ನಲ್ಲಿ ಉಪಯೋಗಿಸುವ ಬ್ಯಾರೆಲ್ಗಳನ್ನು ಮಗುಚಿ ಹಾಕಬೇಕು. ಸುತ್ತಮುತ್ತ ನೀರು ನಿಲ್ಲದಂತೆ ಪರಿಸರ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದರು.
ಬುಧವಾರ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಬೋಟ್ ಮಾಲೀಕರು, ಮೀನುಗಾರರು, ಮಹಿಳಾ ಮೀನುಗಾರ ಸಂಘ, ಕೊಚ್ಚಿನ್ ಶಿಫ್ ಯಾರ್ಡ್ ಆಶ್ರಯದಲ್ಲಿ ನಡೆದ ಡೆಂಘೆ, ಮಲೇರಿಯಾ, ಚಿಕುನ್ಯಗುನ್ಯಾ, ಮೆದುಳುಜ್ವರ ನಿಯಂತ್ರಣ ಕುರಿತ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯ ನಿರ್ದೇಶಾನಲಯ ಆದೇಶದಂತೆ ಪ್ರತಿ ಶುಕ್ರವಾರ ಡೆ ಡೇ ಮಾಡಬೇಕು. ಒಳನಾಡು ಮತ್ತು ಬಂದರು ಇಲಾಖೆಗೆ ಸಂಬಂಧ ಪಟ್ಟಂತಹ ಜಾಗದಲ್ಲಿ ಒಣಮೀನು ತಯಾರಿಸುವ ಸಿಮೆಂಟ್ ತೊಟ್ಟಿಗಳಿಗೆ ಮುಚ್ಚಳ ಅಥವಾ ರ್ಟಪಾಲ್ ಅಳವಡಿಸುವಂತೆ ಮಹಿಳಾ ಮೀನುಗಾರರಿಗೆ ತಿಳಿಸಿದರು.
ಸಭೆಯಲ್ಲಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮಾತನಾಡಿ, ಶೇ.90ರಷ್ಟು ಭಾಗ ಬೋಟ್ಗಳಿಗೆ ಟೈಯರ್ ತೆಗೆದು ರೋಪ್ ಹಾಕಿದ್ದು, ಇನ್ನೂ ಉಳಿದ ಬೋಟ್ಗಳಿಗೂ ರೋಪ್ ಅಳವಡಿಸುವಂತೆ ಸಂಘದ ಮೂಲಕ ಮಾಹಿತಿ ನೀಡಲಾಗುವುದು ಎಂದರು. ಅಧ್ಯಕ್ಷತೆಯನ್ನು ಪೌರಯುಕ್ತ ರಾಯಪ್ಪ ವಹಿಸಿದರು. ಮೀನುಗಾರಿಕೆ ಜಂಟಿ ನಿರ್ದೇಶಕ ವಿವೇಕ್, ಮೀನುಗಾರಿಕೆ ಉಪ ನಿರ್ದೇಶಕಿ ಸವಿತಾ ಖಾದ್ರಿ ಎಸ್ ಕೆ, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಕಾರಿ ಡಾ. ಜೇಷ್ಮಾ, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.