

ಉಡುಪಿ: ಎಳ್ಳಮಾವಾಸ್ಯೆ ಅಂಗವಾಗಿ ಶುಕ್ರವಾರ ಮುಂಜಾನೆ ಮಲ್ಪೆ ವಡಭಾಂಡೇಶ್ವರ ಸಮುದ್ರ ತೀರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸಮುದ್ರಸ್ನಾನ ಮಾಡಿ ಪಿಂಡ ಪ್ರದಾನ ನೆರವೇರಿಸಿದರು. ಹೊರ ಜಿಲ್ಲೆಗಳಿಂದಲೂ ಆಗಮಿಸಿದ್ದ ನೂರಾರು ಭಕ್ತರು ಸಮುದ್ರ ಸ್ನಾನದ ಬಳಿಕ ವಡಭಾಂಡೇಶ್ವರ ಬಲರಾಮನ ದರ್ಶನ ಮಾಡಿ, ದೇವಸ್ಥಾನದ ಸಾಕ್ಷಿ ಕಲ್ಲು ಮುಟ್ಟಿ ಪ್ರದಕ್ಷಿಣೆ ಹಾಕಿದರು. ಸಮುದ್ರ ತಡದಲ್ಲಿ ವೈದಿಕರ ನೆರವಿನೊಂದಿಗೆ ಅಗಲಿದ ಹಿರಿಯರಿಗೆ ಪಿಂಡ ಪ್ರದಾನ, ತಿಲತರ್ಪಣ ಮೊದಲಾದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಬಿಗಿ ಬಂದೋಬಸ್ತ್
ಸಹಸ್ರ ಸಂಖ್ಯೆಯಲ್ಲಿ ಜನರು ಆಗಮಿಸಿದ ಹಿನ್ನೆಲೆಯಲ್ಲಿ ಮಲ್ಪೆ ಹಾಗೂ ವಡಾಭಂಡೇಶ್ವರ ಸಮುದ್ರ ತೀರದಲ್ಲಿ ಕರಾವಳಿ ತಟ ರಕ್ಷಣಾ ಪಡೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನುರಿತ ಮುಳುಗು ತಜ್ಞರು ಸಮುದ್ರಕ್ಕೆ ಇಳಿಯುವವರ ಬಗ್ಗೆ ನಿಗಾ ವಹಿಸಿದ್ದರು.
ಮಟ್ಟುವಿನಲ್ಲಿ ಪಲಿಮಾರು ಶ್ರೀ ಸಮುದ್ರಸ್ನಾನ
ಪಲಿಮಾರು ಹಿರಿಯ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಎಳ್ಳಮಾವಾಸ್ಯೆಯ ಪ್ರಯುಕ್ತ ಮಟ್ಟು ಕಡಲಕಿನಾರೆಯಲ್ಲಿ ಸಮುದ್ರಸ್ನಾನ ಮಾಡಿ, ತರ್ಪಣ ನೀಡಿದರು. ಈ ಸಂದರ್ಭದಲ್ಲಿ ಮಟ್ಟು ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿ ಪ್ರವೀಣ್ ತಂತ್ರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ ರಾವ್, ಕೋಟೆ ಗ್ರಾಮಪಂಚಾಯಿತಿ ಸದಸ್ಯ ನಾಗರಾಜ್, ಸ್ಥಳೀಯರಾದ ಕೃಷ್ಣ ರಾವ್, ಡಾ.ಅನಂತ ಹೆಬ್ಬಾರ್, ಹರೀಶ್, ಶಂಕರ್, ಮುಂಬೈಯ ಉದ್ಯಮಿ ಸಚ್ಚಿದಾನಂದ ರಾವ್, ಮಠದ ಮ್ಯಾನೇಜರ್ ಪ್ರಹ್ಲಾದ ರಾವ್ ಮೊದಲಾದವರು ಉಪಸ್ಥಿತರಿದ್ದರು.