

ಉಡುಪಿ: ರಾಜ್ಯದ ಕರಾವಳಿ ಕಾವಲು ಪಡೆಗೆ ನೀಡಿರುವ ತರಬೇತಿಯ ಕಾರ್ಯ ವಿಧಾನಗಳನ್ನು ದೈನಂದಿನ ಕರ್ತವ್ಯದಲ್ಲಿ ಸಮರ್ಪಕವಾಗಿ ಅಳವಡಿಸಿಕೊಳ್ಳುವುದರಿಂದ ರಾಜ್ಯದ ಮೂಲಕ ಕರಾವಳಿ ತೀರವನ್ನು ಸುರಕ್ಷಿತವಾಗಿಡಲು ಸಾಧ್ಯವಾಗಲಿದೆ ಎಂದು ಮಂಗಳೂರು ವಿಭಗದ ಕೋಸ್ಟ್ ಗಾರ್ಡ್ನ ಡಿಐಜಿ ಕಮಾಂಡರ್ ಪಿ.ಕೆ.ಮಿಶ್ರಾ ಹೇಳಿದರು.
ಶನಿವಾರ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕಚೇರಿಯಲ್ಲಿ ಮಲ್ಪೆ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ ಮೊದಲ ತಂಡದ ತರಬೇತಿ ಸಮಾರೋಪದಲ್ಲಿ ಮಾತನಾಡಿದರು. ಸಮುದ್ರದಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸೂಕ್ತ ರೀತಿಯ ಸಂವಹನ ಹಾಗೂ ಕಾರ್ಯಚರಣೆ ಕುರಿತ ಸ್ಪಷ್ಟ ಮಾಹಿತಿಗಳು ಸಿಬ್ಬಂದಿಗೆ ಇರಬೇಕು. ಕೌಶಲ್ಯದಿಂದ ಕೂಡಿದ ಕಾರ್ಯವಿಧಾನವನ್ನು ಅಳವಡಿಸಿಕೊಂಡು ಕರ್ತವ್ಯ ಸಂದರ್ಭದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬೇಕು. ಸಿಬ್ಬಂದಿಗೆ ಇನ್ನೂ ಹೆಚ್ಚಿನ ತರಬೇತಿಯ ಅಗತ್ಯವಿದ್ದಲ್ಲಿ ಕೋಸ್ಟ್ ಗಾರ್ಡ್ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮಾತನಾಡಿ, ಕರಾವಳಿ ಭದ್ರತಾ ತರಬೇತಿ ಸಂಸ್ಥೆಯಲ್ಲಿ ಪೊಲೀಸರಿಗೆ ಮಾತ್ರವಲ್ಲದೇ ಜಿಲ್ಲೆ ಹಾಗೂ ರಾಜ್ಯದ ಕಂದಾಯ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಸಿಬ್ಬಂದಿಗೂ ಅಗತ್ಯ ತರಬೇತಿ ನೀಡುವುದರಿಂದ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ. ಸಾರ್ವಜನಿಕರಿಗೂ ಸಹ ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ನೀಡುವ ಮೂಲಕ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದರು.
ನಕ್ಸಲ್ ನಿಗ್ರಹ ಪಡೆಯ ಎಸ್ಪಿ ನಿಕ್ಕಂ ಪ್ರಕಾಶ್ ಅಮೃತ್ ಉಪಸ್ಥಿತರಿದ್ದರು. ಕರಾವಳಿ ಕಾವಲು ಪೊಲೀಸ್ ಎಸ್ಪಿ ಹಾಗೂ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಅಹದ್ ಸ್ವಾಗತಿಸಿದರು. ಕರಾವಳಿ ಕಾವಲು ಪೊಲೀಸ್ ಇನ್ಸ್ಪೆಕ್ಟರ್ ಶಂಕರ್ ನಿರೂಪಿಸಿದರು. ಇನ್ಸ್ಪೆಕ್ಟರ್ ಪ್ರಮೋದ್ ವಂದಿಸಿದರು.
25 ಸಿಬ್ಬಂದಿ ವಿಶೇಷ ತರಬೇತಿ
ಮಲ್ಪೆಯ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯಲ್ಲಿ ಫೆಬ್ರವರಿ 13 ರಿಂದ 25 ರ ವರೆಗೆ ನಡೆದ ಪ್ರಥಮ ತಂಡದ ಈ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯದ ಕರಾವಳಿ ಕಾವಲು ಪೊಲೀಸ್ನ 25 ಸಿಬ್ಬಂದಿ ಭಾಗವಹಿಸಿದ್ದು, ಇವರಿಗೆ ಸಮುದ್ರದಲ್ಲಿ ಈಜು ತರಬೇತಿ, ಅಪಾಯಕ್ಕೆ ಸಿಲುಕಿದವರ ರಕ್ಷಣೆ, ಅಗ್ನಿ ಅವಘಡಗಳಿಂದ ರಕ್ಷಣೆ, ಸಮುದ್ರದಲ್ಲಿ ಸಂಪರ್ಕ ವ್ಯವಸ್ಥೆಗಳ ಬಳಕೆ, ಬೋಟ್ಗಳ ಕಾರ್ಯವಿಧಾನ, ಡ್ರೋಣ್ ಬಳಕೆ, ಅಗತ್ಯ ಕಾಯಿದೆ ಸೇರಿದಂತೆ ರಕ್ಷಣಾ ಕಾರ್ಯಚರಣೆಗೆ ಅಗತ್ಯವಿರುವ ತರಬೇತಿಯನ್ನು ನೀಡಲಾಗಿದೆ.