

ಉಡುಪಿ: ಮಲ್ಪೆ ಕಡಲ ತೀರಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಅವರ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಶುಕ್ರವಾರ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಲ್ಪೆ ಬೀಚ್ಗೆ ವಾರಾಂತ್ಯದಲ್ಲಿ ಮಲ್ಪೆ ಬೀಚ್, ಸೀವಾಕ್, ಸೈಂಟ್ ಮೇರೀಸ್ ದ್ವೀಪಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಹ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಡುಕೆರೆ ಕಡಲ ತೀರವನ್ನು ಅಭಿವೃದ್ಧಿಪಡಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಪ್ರವಾಸಿಗರ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ. ಇದಕ್ಕೆ ಒತ್ತು ನೀಡಬೇಕು ಎಂದರು.
ಬೀಚ್ ನಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಾಹನ ಪಾರ್ಕಿಂಗ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು. ಅಪಘಾತಗಳು ಸಂಭವಿಸಿದ್ದಲ್ಲಿ ಚಿಕಿತ್ಸೆ ನೀಡಲು ಅಲ್ಲಿನ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ, ಎಲ್ಲಾ ರೀತಿಯ ಔಷಧ ಹಾಗೂ ವೈದ್ಯಕಿಯ ಉಪಕರಣಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು.
ಮಲ್ಪೆ ಬೀಚ್ ಪ್ರದೇಶದಲ್ಲಿರುವ ಹೈಮಾಸ್ಟ್ ಕಂಬಗಳಿಗೆ ದೀಪ ಅಳವಡಿಸುವಂತೆ ಹಾಗೂ ಬೀಚ್ನ ಉತ್ತರ ಭಾಗದಲ್ಲಿ ಹೊಸದಾಗಿ ಹೈಮಾಸ್ಟ್ ಕಂಬಗಳನ್ನು ಹಾಗೂ ದಾರಿದೀಪವನ್ನು ಅಳವಡಿಸಲು ಯೋಜನೆಯನ್ನು ಸಿದ್ಧಪಡಿಸುವಂತೆ ತಿಳಿಸಿದರು.
ಮೀನುಗಾರಿಕಾ ಚಟುವಟಿಕೆಗಳಿಂದಾಗಿ ಕಲ್ಮಾಡಿ ಭಾಗದಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆಗಳುಂಟಾಗುತ್ತಿದ್ದು, ಇದರ ನಿರ್ವಹಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸೈಂಟ್ ಮೇರೀಸ್ ದ್ವೀಪಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಪ್ರವಾಸೀ ಬೋಟುಗಳು, ಸಾಮರ್ಥ್ಯಕ್ಕೆ ಅನುಸಾರವಾಗಿ ನಿಗಧಿತ ಜನಕ್ಕಿಂತ ಹೆಚ್ಚಿನ ಜನರನ್ನು ಕೊಂಡೊಯ್ಯಬಾರದು. ಪ್ರಯಾಣಿಕರ ಬ್ಯಾಗ್ ಹಾಗೂ ಲಗೇಜ್ಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ಎಲ್ಲಾ ಪ್ರಯಾಣಿಕರು ಲೈಫ್ ಜಾಕೆಟ್ ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ರ್ನಿಲಕ್ಷ್ಯ ಕಂಡುಬಂದಲ್ಲಿ ಆ ಬೋಟಿನ ಪರವಾನಿಗೆಯನ್ನು ರದ್ದುಪಡಿಸಿ ಮಾಲೀಕರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೀಚ್ನ ಸಮೀಪದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಗೂಡಂಗಡಿಗಳ ಕುರಿತು ಪೊಲೀಸ್ ಇಲಾಖೆ, ನಗರಸಭೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಮಲ್ಪೆ ಬೀಚ್ ಉತ್ತರ ಭಾಗದಲ್ಲಿನ ಖಾಲಿ ಜಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಾಗೂ ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಮಾಡಲು ಅನುಕೂಲವಾಗುವಂತೆ ಬೀಚ್ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಮಾಸ್ಟರ್ ಪ್ಲಾನ್ ರೂಪಿಸಿ, ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಪೌರಾಯುಕ್ತ ರಾಯಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.