ಕಡಲ ತೀರದ ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ

UDP-17-MALPE
Published on

ಉಡುಪಿ: ನಿಸರ್ಗ ದತ್ತವಾಗಿ ದೊರಕಿರುವ ಸುಂದರ ಕಡಲ ತೀರ ಸ್ವಚ್ಛ ಹಾಗೂ ಸುರಕ್ಷಿತವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ನಿಟ್ಟಿನಲ್ಲಿ ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಏಕ ಬಳಕೆ ಪ್ಲಾಸ್ಟಿಕ್‌ನ ಬಳಕೆ ತ್ಯಜಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.

ಶನಿವಾರ ಮಲ್ಪೆ ಬೀಚ್‌ನಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಭೂ ವಿಜ್ಞಾನ ಇಲಾಖೆ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಸಹಯೋಗದೊಂದಿಗೆ ನಡೆದ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಪರಿಸರ ರಕ್ಷಣೆಗಾಗಿ ಪೂರಕ ಚಟುವಟಿಗಳು ದಿನಚರಿ ಭಾಗವಾಗಬೇಕು. ಯುವ ಜನರಿಗೆ ಬಾಲ್ಯದಿಂದಲೇ ಇಂತಹ ಚಟುವಟಿಕೆಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ಪ್ರತೀ ಮನೆ ಹಾಗೂ ಶಾಲೆಗಳಲ್ಲಿ ನಡೆಯಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಕಡಲ ತೀರದ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮಗಳಿಗೆ ಸೀಮಿತವಾಗದೇ ಇದೊಂದು ನಿರಂತರ ಪ್ರಕ್ರಿಯೆಯಾಗಬೇಕು. ಆ ಮೂಲಕ ಮನುಷ್ಯರ ಹಾಗೂ ಪ್ರಕೃತಿಯ ನಡುವೆ ಪರಸ್ವರ ಸಾಮರಸ್ಯ ಬೆಸೆಯಲು ಸಾಧ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ಮಲ್ಪೆ ಬೀಚ್‌ನ ಹಿರಿಮೆಯನ್ನು, ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಕಡಲ ತೀರದ ಸ್ವಚ್ಛತೆ ಹಾಗೂ ಸುರಕ್ಷತೆ ಅತೀ ಮಹತ್ವದ್ದಾಗಿದೆ ಎಂದರು.

ಕರಾವಳಿ ಕಾವಲು ಪೊಲೀಸ್ ಪಡೆಯ ಅಧೀಕ್ಷಕ ಅಬ್ದುಲ್ ಅಹಮದ್, ಭಾರತೀಯ ತಟ ರಕ್ಷಣಾ ಪಡೆಯ ಕಮಾಂಡೆಂಟ್ ಅವಿನಾಶ್, ಪೌರಾಯುಕ್ತ ಡಾ.ಉದಯ್ ಕುಮಾರ್ ಶೆಟ್ಟಿ, ಕೇಂದ್ರ ಸರ್ಕಾರದ ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಡಾ. ಆಶಾ ಉಪಸ್ಥಿತರಿದ್ದರು. ಸಂದೇಶ್ ಕುಮಾರ್ ನಿರೂಪಿಸಿದರು. ನೆಹರೂ ಯುವ ಕೇಂದ್ರದ ಯುವಜನ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿ’ಸೋಜಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net