ಹಲ್ಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮಕ್ಕೆ ಆಗ್ರಹ

25udp sc okkuta
Published on

ಉಡುಪಿ: ಮಲ್ಪೆ ಬಂದರು ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರನ್ನು ಮೀನು ಕಳವು ಮಾಡಿದ ಆರೋಪದಲ್ಲಿ ಅಮಾನವೀಯವಾಗಿ ಮರಕ್ಕೆ ಹಗ್ಗದಿಂದ ಕಟ್ಟಿಹಾಕಿ, ಥಳಿಸಿದ ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು. ರಾಜಿ ಮಾಡಿಕೊಳ್ಳಲು ಪ್ರಜ್ಞಾವಂತ ಸಮಾಜ ಅವಕಾಶ ನೀಡಬಾರದು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಹೇಯ ಅಪರಾಧ ಕೃತ್ಯವನ್ನು ಬಹಿರಂಗವಾಗಿ ಬೆಂಬಲಿಸಿದ ಎಲ್ಲರ ವಿರುದ್ಧ ಕ್ರಮಕೈಗೊಳ್ಳಬೇಕು. ಜಾತಿ, ಮತ, ಧರ್ಮ ಬೇದ ಭಾವ ಇಲ್ಲದೆ ಎಲ್ಲರೂ ಪೊಲೀಸರನ್ನು ಬೆಂಬಲಿಸಬೇಕು. ಕರ್ತವ್ಯ ಲೋಪ ಎಸಗಿದ ಪೊಲೀಸರ ವಿರುದ್ಧವೂ ಕ್ರಮಕೈಗೊಳ್ಳಲು ಅವಕಾಶವಿದೆೆ. ಆದ್ದರಿಂದ ಯಾರೂ ಸಂಘಟಿತ ಶ್ರಮಜೀವಿ ಜನವರ್ಗವನ್ನು ಕಾನೂನು ಉಲ್ಲಂಘಿಸಲು ಪ್ರೇರೇಪಿಸಬಾರದು ಎಂದು ವಿನಂತಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರರು ಶ್ರಮ ಜೀವಿಗಳು. ಆದರೆ ಈ ವಿಷಯವನ್ನು ಯಾರೂ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಬಾರದು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ಪಿಯವರು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸ ಬೇಕು, ಸಂತ್ರಸ್ಥೆಗೆ ತುರ್ತು ಪರಿಹಾರ ಬಿಡುಗಡೆ ಮಾಡಬೇಕು. ಕುಟುಂಬಕ್ಕೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದರು.

ಜನರಲ್ಲಿ ಆತಂಕ

ಮಲ್ಪೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಲವರು ಹೇಯ ಕೃತ್ಯವನ್ನು ಸಮರ್ಥಿಸಿ, ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಹಾಕಿದ ಕೇಸು ವಾಪಸು ಪಡೆಯಬೇಕೆಂದು ನೀಡಿದ ಎಚ್ಚರಿಕೆ ಸ್ವರೂಪದ ಆಗ್ರಹಗಳಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಜನರಲ್ಲಿ ಆತಂಕವುಂಟಾಗಿದೆ. ಹೀಗಾಗಿ ದೌರ್ಜನ್ಯವನ್ನು ಬೆಂಬಲಿಸಿರುವ ಹಾಗೂ ಸಮರ್ಥಿಸಿರುವ ಎಲ್ಲರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿ, ಕಾನೂನುಕ್ರಮ ಕೈಗೊಳ್ಳಬೇಕು. ಸೌಹಾರ್ದತೆಯಿಂದ ಬದುಕಲು ಇದು ಅತ್ಯಗತ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಾಂತಪ್ಪ, ಸದಾಶಿವ ಸಾಲಿಯಾನ್​, ಸರೋಜಿನಿ ಬಂಟ್ವಾಳ, ರಘು ಎಕ್ಕಾರ್​, ಕೃಷ್ಣ ಮೂಡುಬೆಳ್ಳೆ, ಮಾಧವ ಕಾವೂರು, ಪದ್ಮನಾಭ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net