ಜಾತಿ ನಿಂದನೆ ಕೇಸ್​ ವಾಪಾಸು ಪಡೆಯಲು ಸಂತ್ರಸ್ತೆಯಿಂದಲೇ ಡಿಸಿಗೆ ಮನವಿ

udp-24-malpe dc
Published on

ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರರ ವಿರುದ್ಧ ದಾಖಲಿಸಿದ ಜಾತಿನಿಂದನೆ ಪ್ರಕರಣ ಹಿಂಪಡೆಯುವಂತೆ ಸಂತ್ರಸ್ತೆ ಲಕ್ಕವ್ವ ಬಾಯಿ ನೇತೃತ್ವದಲ್ಲಿ ಸಮುದಾಯದ ಮುಖಂಡರು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ವಿವಿಧ ಜಿಲ್ಲೆಗಳಿಂದ ಉದ್ಯೋಗ ಅರಸಿಕೊಂಡು ಉಡುಪಿಗೆ ಬಂದು ಮಲ್ಪೆ ಮೀನುಗಾರರ ಸಂದ ಸಹಕಾರದಿಂದ ಮಲ್ಪೆ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದೇವೆ. ಮೀನುಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಬಡ ಕಾರ್ಮಿಕರಿಗೆ ಸೌಹಾರ್ದಯುತ ರೀತಿಯಲ್ಲಿ ಕೆಲಸ ಮಾಡಿ ಉತ್ತಮ ಜೀವನ ನಡೆಸಲು ಅವಕಾಶ ನೀಡುವಂತೆ ಸಮುದಾಯದ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ. ಶಾಸಕ ಯಶ್​ಪಾಲ್​ ಸುವರ್ಣ ಅವರಿಗೂ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ನಾಯ್ಕ, ಮಂಜುನಾಥ ಚೌಹಾನ್​ ಮೊದಲಾದವರು ಉಪಸ್ಥಿತರಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆ ಲಕ್ಕವ್ವ ಬಾಯಿ, ನಾನು ಮೀನು ಕದ್ದಿರುವುದು ಹೌದು. ಅವತ್ತೇ ರಾತ್ರಿ ರಾಜಿ ಮಾಡಿ ಬಂದಿದ್ದೇವೆ. ಪ್ರಕರಣ ರಾಜಿಯಲ್ಲಿ ಮುಗಿದಿತ್ತು. ನನಗೆ ಅಕ್ಷರ ಅಭ್ಯಾಸ ಇಲ್ಲ. ಯಾವುದಕ್ಕೆ ಸಹಿ ಪಡೆದಿದ್ದಾರೆ ಎಂದು ಗೊತ್ತಿಲ್ಲ. ಮೀನುಗಾರ ಮಹಿಳೆಯರ ಮೇಲೆ ಕೇಸ್​ ದಾಖಲಿಸಿದ ಬಗ್ಗೆ ನನಗೆ ಗೊತ್ತಿರಲಿಲ್ಲ. ರಾಜಿ ಮಾಡಿದ ನಂತರ ಮರುದಿನ ಫೋನ್​ ಮಾಡಿ ಆಟೋದಲ್ಲಿ ಕರೆಸಿಕೊಂಡ ಪೊಲೀಸರು ಸಹಿ ಮಾಡಲು ಹೇಳಿದರು. ನನಗೆ ಓದಲು ಬರುವುದಿಲ್ಲ. ನಿನ್ನೆ ನೀನು ರಾಜಿ ಆಗಿದ್ದೀಯಾ, ಇವತ್ತು ಹೆಬ್ಬೆಟ್ಟು ಹಾಕು ಎಂದರು. ಅದಕ್ಕೆ ನಾನು ಹೆಬ್ಬೆಟ್ಟು ಹಾಕಿದ್ದೇನೆ. ಮುಂದೆ ಏನು ವಿಚಾರ ಆಗಿದೆ ಗೊತ್ತಿಲ್ಲ. ಹೀಗಾಗಿ ಮೀನುಗಾರರ ವಿರುದ್ಧ ದಾಖಲಾದ ಜಾತಿ ನಿಂದನೆ ಸೆಕ್ಷನ್​ ಕೈಬಿಡಲು ಒತ್ತಾಯಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net