

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 84. ಆದರೆ ಈ ಮಕ್ಕಳ ಸಂಖ್ಯೆ ಇದಕ್ಕಿಂತ ಹೆಚ್ಚಿದ್ದರೂ ಬೆಳಕಿಗೆ ಬರುತ್ತಿಲ್ಲ…!
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಇದಾಗಿದೆ. ವಾಸ್ತವ ಬೇರೆಯೇ ರೀತಿಯಲ್ಲಿ ಇದೆ.
ಎಚ್.ಡಿ.ಕೋಟೆ, ಹುಣಸೂರು ತಾಲೂಕಿನ ಕಾಡಂಚಿನಲ್ಲಿರುವ ಬುಡಕಟ್ಟು ಸಮುದಾಯದ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಈ ಭಾಗದಲ್ಲಿರುವ ಅಂಗನವಾಡಿ, ಆಶ್ರಮ ಶಾಲೆಯಲ್ಲಿ ದಾಖಲಾಗಿರುವ ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಿಕೊಂಡಿದೆ. ಉಳಿದಂತೆ ಜಿಲ್ಲೆಯ ವಿವಿಧ ಭಾಗದಲ್ಲೂ ಅಪೌಷ್ಟಿಕ ಮಕ್ಕಳಿದ್ದಾರೆ.
ಇವರ ಸಂಖ್ಯೆ ಹೆಚ್ಚಾದರೆ, ನಿಖರ ಮಾಹಿತಿ ನೀಡಿದರೆ ಸಮಸ್ಯೆ ಆಗಲಿದೆ ಎಂಬ ಕಾರಣಕ್ಕೆ ಈ ಮಕ್ಕಳ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ. ಈ ಮಕ್ಕಳ ತೂಕ ಮತ್ತು ಎತ್ತರವನ್ನು ಮರೆ ಮಾಚಲಾಗುತ್ತಿದೆ. ಸಾಮಾನ್ಯ ಮಕ್ಕಳಿಗಿಂತ ಅಪೌಷ್ಟಿಕ ಮಕ್ಕಳ ತೂಕ ಮತ್ತು ಎತ್ತರ ಕಡಿಮೆ ಇದ್ದರೂ ಬರೆದುಕೊಳ್ಳುವಾಗ ವ್ಯತ್ಯಾಸ ಮಾಡಲಾಗುತ್ತಿದೆ.
ಈ ಮೂಲಕ ಸಾಮಾನ್ಯ ಮಕ್ಕಳಂತೆ ಬಿಂಬಿಸಲಾಗುತ್ತಿದೆ. ಈ ರೀತಿ ಅನುಮಾನವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಕರೆದಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ(ದಿಶಾ ಸಮಿತಿ) ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ. ಇದು ಕಳವಳಕಾರಿ ಸಂಗತಿ ಎನಿಸಿದೆ.
ಮಕ್ಕಳ ಅಪೌಷ್ಟಿಕತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮವಹಿಸಬೇಕಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರದಲ್ಲಿರುವ ಸಾಮಾನ್ಯ ಮಕ್ಕಳಿಗೆ ಪ್ರತಿ ದಿನ ರೂ.8 ರಂತೆ ಘಟಕ ವೆಚ್ಚ ಭರಿಸುತ್ತಿದ್ದು, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ರೂ. 12ರ ಪೂರಕ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ. 3ರಿಂದ 6 ವರ್ಷದೊಳಗಿನ ಎಲ್ಲ ಮಕ್ಕಳಿಗೂ ವಾರದಲ್ಲಿ ಎರಡು ದಿನ ಮೊಟ್ಟೆಯನ್ನು ವಿತರಿಸಲಾಗುತ್ತಿದೆ.
6 ತಿಂಗಳಿಂದ 6 ವರ್ಷದೊಳಗಿನ ಎಲ್ಲ ಮಕ್ಕಳಿಗೂ ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ಸಹ ಕೊಡಲಾಗುತ್ತಿದೆ.
ತೀವ್ರ ಅಪೌಷ್ಟಿಕತೆ ಇರುವ ಮಕ್ಕಳಿಗೆ ಹೆಚ್ಚುವರಿಯಾಗಿ ವಾರದಲ್ಲಿ 3 ದಿನ ಹಾಲು ಮತ್ತು 3 ದಿನ ಮೊಟ್ಟೆಯನ್ನು ವಿತರಿಸಲಾಗುತ್ತಿದೆ. ಮೊಟ್ಟೆಯನ್ನು ಉಪಯೋಗಿಸದ ಮಕ್ಕಳಿಗೆ ವಾರದಲ್ಲಿ 6 ದಿನ ಹಾಲನ್ನು ನೀಡಲಾಗುತ್ತಿದೆ. ತೀವ್ರ ಅಪೌಷ್ಟಿಕತೆ ಇರುವ ಮಕ್ಕಳಿಗೆ ವೈದ್ಯಕೀಯ ವೆಚ್ಚ ಯೋಜನೆಯಡಿ ಔಷಧ ಹಾಗೂ ಚಿಕಿತ್ಸಾ ಆಹಾರಕ್ಕಾಗಿ( ಥೆರಪೆಟಿಕ್ ಫುಡ್) 2 ಸಾವಿರ ರೂ. ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಆದರೆ, ವಾಸ್ತವ ಮಾತ್ರ ಬೇರೆ ರೀತಿಯಲ್ಲಿ ಇದೆ. ಈ ಮಕ್ಕಳ ಪತ್ತೆ, ತಪಾಸಣೆ, ಆರೈಕೆ, ಚಿಕಿತ್ಸೆ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಇದಕ್ಕೆ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡುವಿನ ಸಮನ್ವಯ ಕೊರತೆಯೇ ಮುಖ್ಯ ಕಾರಣ. ಅಪೌಷ್ಟಿಕತೆ ಆರಂಭ ಆಗುವುದು ತಾಯಿಯಿಂದ. ಈ ನಿಟ್ಟಿನಲ್ಲಿ ಪ್ರಸವ ನಂತರ ಮಗುವಿನ ಆರೈಕೆಗಿಂತಲೂ ಪ್ರಸವ ಪೂರ್ವ ಆರೈಕೆ ಅಗತ್ಯವಾಗಿದೆ.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೂ ಸೂಕ್ತ ಪೌಷ್ಟಿಕಾಂಶ ದೊರಕುತ್ತಿಲ್ಲ. ಅಲ್ಲದೆ, ಅಂಥವರನ್ನು ಗುರುತಿಸಿ ನಿರಂತರವಾಗಿ ಪೌಷ್ಟಿಕ ಆಹಾರ ಸರಬರಾಜು ಮಾಡುತ್ತಿಲ್ಲ. ಜತೆಗೆ, ಕೇವಲ ಬೆರಳೆಣಿಕೆಯಷ್ಟೇ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ದೊರೆಯುತ್ತಿದೆ. ಉಳಿದವರಿಗೆ ಇಲ್ಲ ಎನ್ನುವಂತಾಗಿದೆ. ಆದ್ದರಿಂದ ಈ ವಿಷಯದಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿದಾಗ ಅಪೌಷ್ಟಿಕ ಮಕ್ಕಳ ಪತ್ತೆ, ಅವರಿಗೆ ಸೂಕ್ತ ಪೌಷ್ಟಿಕ ಆಹಾರ ವಿತರಣೆ, ಆರೈಕೆ, ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.
ಅಪೌಷ್ಟಿಕ ಮಕ್ಕಳನ್ನು ಗುರುತಿಸಿ, ಅವರಿಗೆ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಸ್ಪತ್ರೆಯಲ್ಲಿ ನ್ಯೂಟ್ರಿಷನ್ ಪುನರ್ವಸತಿ ಕೇಂದ್ರ(ಎನ್.ಆರ್.ಸಿ) ಸ್ಥಾಪಿಸಲಾಗಿದೆ. ಕೆ.ಆರ್.ಆಸ್ಪತ್ರೆಯ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ 20 ಹಾಸಿಗೆ ಕಾಯ್ದಿಡಲಾಗಿದೆ. ಅಲ್ಲಿ ಕೇವಲ 4 ಹಾಸಿಗೆ ಭರ್ತಿಯಾಗಿವೆ. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಸಿಗೆ ಕಾಯ್ದಿಡಲಾಗಿದೆ. ಆದರೆ, ಇಲ್ಲಿಯೂ ಬಹುತೇಕ ಹಾಸಿಗೆಗಳು ಖಾಲಿ ಇವೆ. ಈ ಕೇಂದ್ರದಲ್ಲಿ 2 ವಾರ ಕಾಲ ಮಕ್ಕಳ ಆರೈಕೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಇಲ್ಲಿ ದಾಖಲಾಗುವ ಮಕ್ಕಳಿಗೆ ನಿತ್ಯ ತಲಾ 125 ರೂ. ಆಹಾರ, ಔಷಧ ವೆಚ್ಚ ಮತ್ತು ಉದ್ಯೋಗ ನಷ್ಟ ತಪ್ಪಿಸಲು ತಾಯಿಗೂ ಒಂದು ದಿನ ವೇತನ ನೀಡಲಾಗುತ್ತಿದೆ. ಆದಾಗ್ಯೂ ಈ ಸೌಲಭ್ಯವೇ ಬಳಕೆಯಾಗುತ್ತಿಲ್ಲ. ಹಾಸಿಗೆ ಖಾಲಿಯಾದ ತಕ್ಷಣ ಇತರ ಅಪೌಷ್ಟಿಕ ಮಕ್ಕಳನ್ನು ದಾಖಲಿಸಿ ಚಿಕಿತ್ಸೆ, ಆರೈಕೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿಲ್ಲ. ಹೀಗಾಗಿಯೇ ಕಾಯ್ದಿಟ್ಟಿರುವ ಹಾಸಿಗೆಗಳು ಭರ್ತಿಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸಿ ಕೆಲಸ ಮಾಡಬೇಕಿದೆ.
ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪತ್ತೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಅಗತ್ಯ ಇರುವ ಮಕ್ಕಳಿಗೆ ಆರೈಕೆ, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಬಸವರಾಜು
ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ