ಅಪೌಷ್ಟಿಕ ಮಕ್ಕಳಿಗೆ ಹೆಚ್ಚಿನ ಕಾಳಜಿ ಅಗತ್ಯ

14 cc patil news
Published on

ಗದಗ: ತಜ್ಞರ ವರದಿಯಂತೆ ಕೋವಿಡ್ ಸೋಂಕಿನ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಯಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಿಶೇಷ ಕಾಳಜಿಗೆ ಒತ್ತು ನೀಡಬೇಕು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತ ಆಯೋಜಿಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಿಲ್ಲೆಯ 243 ಮಕ್ಕಳ ಆರೋಗ್ಯದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು. ಅಪೌಷ್ಟಿಕತೆ ಹೊಗಲಾಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ಕರೊನಾ ಮೂರನೇ ಅಲೆ ನಿಭಾಯಿಸಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ಮೂಲಕ ಸೋಂಕಿತ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಯಾವುದೇ ಕಾರಣಕ್ಕೂ ಜೀವ ಹಾನಿ ಆಗದಂತೆ ಕ್ರಮ ವಹಿಸಬೇಕೆಂದರು.

ಸದ್ಯ ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗಿದ್ದು ಸಂಭವನೀಯ ಮೂರನೇ ಅಲೆ ಎದುರಾದಲ್ಲಿ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆಗೆ ಅಗತ್ಯದ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಅಧ್ಯಕ್ಷತೆಯಲ್ಲಿ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳ ಸಭೆಯನ್ನು ಜರುಗಿಸಿ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಹಂಚಿಕೆ ಮಾಡುವ ಮೂಲಕ ಮೇಲುಸ್ತುವಾರಿ ವಹಿಸಿಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸತೀಶ ಬಸರೀಗಿಡದ ಮಾತನಾಡಿ, ಈವರೆಗೆ ಜಿಲ್ಲೆಯ 2402 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. 51 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದರು.

2020ರಲ್ಲಿ 18 ವರ್ಷದೊಳಗಿನ ಮಕ್ಕಳಲ್ಲಿ ಶೇ.3.4 ರಷ್ಟಿದ್ದ ಪ್ರಮಾಣ 2021ರಲ್ಲಿ ಶೇ.2.9 ರಷ್ಟಿದೆ. ಸೋಂಕಿನಿಂದ ಯಾವೊಬ್ಬ ಮಗುವೂ ಮೃತಪಟ್ಟಿಲ್ಲ. ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಬೆಡ್ ಗಳನ್ನು ಮಕ್ಕಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಜಗದೀಶ ನುಚ್ಚಿನ ಮಾತನಾಡಿ, ಸೋಂಕಿತರೆಲ್ಲರನ್ನೂ ಕಡ್ಡಾಯವಾಗಿ ಆರೈಕೆ ಕೇಂದ್ರ ಇಲ್ಲವೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಒದಗಿಸಬೇಕು. ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದರು.

ಜಿಮ್್ಸ ನಿರ್ದೇಶಕ ಡಾ.ಪಿ.ಎಸ್. ಭೂಸರಡ್ಡಿ ಮಾತನಾಡಿ, ಜಿಮ್ಸ್ನಲ್ಲಿ 110 ವೆಂಟಿಲೇಟರ್ ವ್ಯವಸ್ಥೆ ಇದೆ. ಮಕ್ಕಳ ಚಿಕಿತ್ಸೆಗಾಗಿ ಜಿಮ್ಸ್​ನಲ್ಲಿ 30 ಐಸಿಯು ವೆಂಟಿಲೇಟರ್ ಬೆಡ್​ಗಳನ್ನು ಮೀಸಲಿಟ್ಟಿದ್ದು, ವಿವಿಧ ಹಂತಗಳಲ್ಲಿ ಇದನ್ನೂ 100ಕ್ಕೆ ವಿಸ್ತರಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸುಂದರೇಶ ಬಾಬು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್., ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಇತರರು ಇದ್ದರು.

2 ಲಕ್ಷ ಜನರಿಗೆ ಲಸಿಕೆ: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಲಸಿಕಾಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ. 8 ಲಕ್ಷ ಸಾರ್ವಜನಿಕರ ಪೈಕಿ 2 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಶೇ.25 ರಷ್ಟು ಗುರಿ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಸದ್ಯ 8270 ಡೋಸ್ ಲಸಿಕೆ ಸಂಗ್ರಹವಿದ್ದು ಇದರಲ್ಲಿ 6540 ಕೋವಿಶೀಲ್ಡ್, 1730 ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಾಲ ಸ್ವರಾಜ ಯೋಜನೆ ಜಾರಿಗೊಳಿಸಿದ್ದು ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸಹಾಯಧನ ನೀಡಲಾಗುತ್ತದೆ ಎಂದರು. ತಂದೆ ಅಥವಾ ತಾಯಿಯನ್ನು ಕಳೆದುಕೊಂಡ 56 ಮಕ್ಕಳು ಜಿಲ್ಲೆಯಲ್ಲಿ ಇದ್ದಾರೆ. ರೋಣ ತಾಲೂಕಿನಲ್ಲಿ ಇಬ್ಬರು ಮಕ್ಕಳು ಪಾಲಕರನ್ನು ಕಳೆದುಕೊಂಡಿದ್ದಾರೆ. ಅವರ ಪಾಲಕರ ಆಸ್ತಿಯನ್ನು ಈ ಮಕ್ಕಳ ಹೆಸರಿಗೆ ನೋಂದಾಯಿಸಲು ಅಗತ್ಯದ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net