

ಚನ್ನಪಟ್ಟಣ: ಕಿರಿದಾದ ಜಾಗ...ಮಳೆ ಬಂದರೆ ಸೋರುವ ಹಾಗೂ ಮುರಿದು ಬೀಳುವಂತಿರುವ ಹೆಂಚಿನ ಮನೆ... ಉಸಿರುಗಟ್ಟುವ ವಾತಾವರಣದಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ... ಇದು ಮಳೂರು ಹೋಬಳಿಯ ನಾಡಕಚೇರಿ ಅವ್ಯವಸ್ಥೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ದೊಡ್ಡಮಳೂರಿನಲ್ಲಿ್ಲ ಮಳೂರು ಹೋಬಳಿಯ ನಾಡಕಚೇರಿ ಹಲವಾರು ವರ್ಷಗಳಿಂದ ಬಾಡಿಗೆ ಕರಾರಿನ ಮೇಲೆ ಕಾರ್ಯನಿರ್ವಹಿಸುತ್ತಿದೆ. ಪ್ರತಿನಿತ್ಯ ಹತ್ತಾರು ಹಳ್ಳಿಯ ಜನ ಬಂದು ಹೋಗುವ ಈ ಕಚೇರಿ ತಾಲೂಕಿಗೆ ಕಪ್ಪುಚುಕ್ಕಿಯಂತಿದೆ.
ತಾಲೂಕು ಕೇಂದ್ರಕ್ಕೆ ಸಮೀಪದಲ್ಲಿರುವ ಕಚೇರಿಯಲ್ಲಿ ಮೂಲಸೌಕರ್ಯವೂ ಇಲ್ಲ. ಹೋಬಳಿ ವ್ಯಾಪ್ತಿಗೆ 48 ಹಳ್ಳಿಗಳು ಬರಲಿದ್ದು, ಭೂ ದಾಖಲೆ, ಕಂದಾಯ ಇಲಾಖೆ ನೀಡುವ ವಿವಿಧ ಪ್ರಮಾಣ ಪತ್ರಗಳು, ಪಿಂಚಣಿ ಸೌಲಭ್ಯ ಹೀಗೆ ಹಲವು ಸೇವೆಗಳನ್ನು ನೀಡಬೇಕಾದ ಕಚೇರಿ ದುಸ್ಥಿತಿ ತಲುಪಿದೆ.
ಈ ಕಟ್ಟಡದಲ್ಲಿ ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಮಳೂರು ವೃತ್ತದ ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಪ್ರತಿನಿತ್ಯ ವಿವಿಧ ಕೆಲಸಗಳಿಗೆ ನೂರಾರು ಮಂದಿ ಬಂದು ಹೋಗುತ್ತಾರೆ. ಇಲ್ಲಿನ ಸಿಬ್ಬಂದಿ ಮತ್ತು ಸಾರ್ವಜನಿಕರು ಆತಂಕದಲ್ಲೇ ಕೆಲಸ ಮುಗಿಸಬೇಕಾದ ಸನ್ನಿವೇಶ ನಿರ್ವಣವಾಗಿದೆ.
ಮಳೆ ಬಂದಾಗ ಕಟ್ಟಡ ಸೋರುವುದರಿಂದ ಇಲ್ಲಿ ದಾಖಲೆಗಳ ಸಂರಕ್ಷಣೆ ಕಷ್ಟ ಸಾಧ್ಯ. ದಾಖಲೆಗಳನ್ನು ಇರಿಸಲು ಸೂಕ್ತ ಭದ್ರತೆ ಇಲ್ಲದಂತಾಗಿದೆ. ನಾಲ್ಕು ಮಂದಿ ಕೂರಲು ಸ್ಥಳವಿರುವ ಜಾಗದಲ್ಲಿ ಹತ್ತಾರು ಮಂದಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಜಾಗ ಇಲ್ಲದ್ದನ್ನೇ ನೆಪವಾಗಿಸಿಕೊಂಡಿರುವ ಇಲ್ಲಿನ ಉಪ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಕಚೇರಿಯ ಕಡೆ ಅಪರೂಪಕ್ಕೆ ಆಗಮಿಸುತ್ತಾರೆ ಎಂಬ ಆರೋಪವೂ ಇದೆ.
ಮುಕ್ತಿ ದೊರೆಯಬೇಕಿದೆ
ಕಚೇರಿಯ ನೂತನ ಕಟ್ಟಡಕ್ಕೆ ಬದಲಿ ಜಾಗದ ಅವಶ್ಯಕತೆಯಿದ್ದು, ತಾಲೂಕು ಆಡಳಿತದಿಂದ ಜಾಗ ಗುರುತಿಸಿ, ಮಂಜೂರಾತಿಗೆ ಕಳುಹಿಸಿಕೊಡಲಾಗಿದೆ. ಕೂಡಲೇ ಜಾಗ ಮಂಜೂರಾಗಿ ನೂತನ ಕಟ್ಟಡ ನಿರ್ವಣವಾಗಲಿ, ಶೀಘ್ರವಾಗಿ ಇಲ್ಲಿನ ಸಮಸ್ಯೆಗೆ ಮುಕ್ತಿ ದೊರೆಯಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.
ಮಳೂರು ಹೋಬಳಿ ನಾಡಕಚೇರಿಯ ಕಟ್ಟಡ ಕಾರ್ಯನಿರ್ವಹಣೆಗೆ ಸೂಕ್ತವಾಗಿಲ್ಲ. ಈಗಾಗಲೇ ಹೆದ್ದಾರಿ ಬದಿ 34 ಗುಂಟೆ ಸರ್ಕಾರಿ ಜಾಗ ಗುರುತಿಸಿ, ಜಾಗ ಮಂಜೂರಿಗೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಜಾಗ ಮಂಜೂರಾದ ಕೂಡಲೇ ನೂತನ ನಾಡಕಚೇರಿ ಹಾಗೂ ವಸತಿಗೃಹ ನಿರ್ವಿುಸಲು ಕ್ರಮ ಕೈಗೊಳ್ಳಲಾಗುವುದು. ಎಲ್.ನಾಗೇಶ್, ತಹಸೀಲ್ದಾರ್, ಚನ್ನಪಟ್ಟಣ ಮಳೂರು ಹೋಬಳಿಯ ನಾಡಕಚೇರಿ ಅವ್ಯವಸ್ಥೆ ಆಗರವಾಗಿದೆ. ಒಂದೆಡೆ ಕಟ್ಟಡದ ಶಿಥಿಲಾವಸ್ಥೆ. ಮತ್ತೊಂದೆಡೆ ಕಚೇರಿಯಲ್ಲಿ ಸಕಾಲಕ್ಕೆ ಸೇವೆಗಳು ಸಿಗುತ್ತಿಲ್ಲ. ಇಂಟರ್ನೆಟ್ ಸೇರಿ ಹಲವು ಸಮಸ್ಯೆಗಳು ಕಾಡುತ್ತಿವೆ. ಕಚೇರಿ ಪಕ್ಕದಲ್ಲೇ ಇತಿಹಾಸ ಪ್ರಸಿದ್ಧ ಅಂಬೆಗಾಲು ಕೃಷ್ಣನ ದೇಗುಲವಿದ್ದು, ಕೂಡಲೇ ಈ ಸಮಸ್ಯೆಗೆ ಮುಕ್ತಿ ದೊರೆಯಬೇಕು. ಮಂಜೇಶ್ಬಾಬು, ಶೆಟ್ಟಿಹಳ್ಳಿ ಗ್ರಾಮಸ್ಥ