

ಕಲಬುರಗಿ: ಬಿಜೆಪಿಯ ಹಿರಿಯ ನಾಯಕರಾದ ಮಾಲೀಕಯ್ಯ ಗುತ್ತೇದಾರ್ ಪಕ್ಷದ ಜೊತೆಗಿದ್ದಾರೆ. ಪಕ್ಷ ಬಿಡಲ್ಲ ಎಂದು ಬಿಜೆಪಿಯ ಕರ್ನಾಟಕ ಲೋಕಸಭಾ ಚುನಾವಣಾ ಉಸ್ತುವಾರಿ ಹಾಗೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಾಧಾ ಮೋಹನ್ ಅಗರವಾಲ್ ಸ್ಪಷ್ಟಪಡಿಸಿದ್ದಾರೆ.
ಕಲ್ಬುರ್ಗಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಮಾಲೀಕಯ್ಯ ಗುತ್ತೇದಾರ್ ಪಕ್ಷದ ಹಿರಿಯ ನಾಯಕರಾಗಿದ್ದು ಉಪಾಧ್ಯಕ್ಷರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದವರು. ಅವರು ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬುದು ಕೇವಲ ವದಂತಿಯಷ್ಟೇ. ಅವರು ನಮ್ಮೊಂದಿಗೆ ಇದ್ದಾರೆ ಮತ್ತು ಅವರೊಂದಿಗೆ ನಾವಿದ್ದೇವೆ ಎಂದು ತಿಳಿಸಿದರು. ಮಾಲೀಕಯ್ಯ ಗುತ್ತೇದಾರ್ ಅವರ ಸಹೋದರ ನಿತಿನ್ ಗುತ್ತೇದಾರ್ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡುರುವುದರಿಂದ ಇಬ್ಬರೂ ಸಹೋದರರು ಈಗ ಬಿಜೆಪಿ ಪಕ್ಷದಲ್ಲಿದ್ದಾರೆ. ಎಲ್ಲವೂ ಚೆನ್ನಾಗಿದೆ. ಆದರೆ ಅವರ ಕುಟುಂಬದ ನಡುವಿನ ಸಣ್ಣ ವೈಮನಸ್ಯದಿಂದ ಮಾತ್ರ ಮಾಲೀಕಯ್ಯ ಗುತ್ತೇದಾರ್ ಅವರು ಮುನಿಸಿಕೊಂಡಿರಬಹುದು. ಸಹೋದರ ನಿತಿನ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಬಗ್ಗೆ ಈಗಾಗಲೇ ಅವರ ಗಮನಕ್ಕೆ ತರಲಾಗಿದ್ದು ಈ ಸಮಸ್ಯೆಯನ್ನು ಪಕ್ಷವು ಸಕಾರಾತ್ಮಕವಾಗಿ ಬಗೆಹರಿಸಲಿದೆ. ಎಲ್ಲವೂ ಸುಗಮಗೊಳ್ಳಲಿದೆ ಮತ್ತು ಎಲ್ಲ ವದಂತಿಗಳು ಸುಳ್ಳಾಗಲಿದೆ ಎಂದು ಅಗರವಾಲ್ ತಿಳಿಸಿದರು.