ಪಾರ್ಕ್‌ನಲ್ಲೇ ಅಲೆಮಾರಿಗಳ ವಾಸ

park
Published on

ಹರೀಶ್ ಮೋಟುಕಾನ ಮಂಗಳೂರು

ಹರಡಿಕೊಂಡಿರುವ ಮದ್ಯದ ಬಾಟಲಿಗಳು, ಆಹಾರ ಹಾಕಿ ತಿಂದು ಎಸೆಯಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳು, ರಾಶಿ ಬಿದ್ದಿರುವ ಕಸ, ನೀರಿಲ್ಲದೆ ಒಣಗಿ ಹೋಗಿರುವ ಗಿಡ, ಮುರಿದು ಬಿದ್ದಿರುವ ಕಲ್ಲು ಬೆಂಚುಗಳು... ಇದು ಮಲ್ಲಿಕಟ್ಟೆ ಗ್ರಂಥಾಲಯ ಮುಂಭಾಗದ ಪಾರ್ಕ್‌ನ ಚಿತ್ರಣ.

ಉದ್ಯಾನವನಗಳು ಜಂಜಾಟದಲ್ಲಿರುವ ಮನಸ್ಸುಗಳಿಗೆ ಪ್ರಫುಲ್ಲತೆ ನೀಡುವುದರ ಜತೆಗೆ ನಗರದ ಸೌಂದರ್ಯ ವೃದ್ಧಿಸುತ್ತದೆ. ಆದರೆ ಉದ್ಯಾನವನ ನಿರ್ವಹಣೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಎಷ್ಟರ ಮಟ್ಟಿಗೆ ಉತ್ಸುಕವಾಗಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ.

ಈ ಪಾರ್ಕ್‌ನ ರಕ್ಷಣೆಗೆ ಕಟ್ಟಲಾದ ಆವರಣ ಗೋಡೆ ಕುಸಿದು ಬಿದ್ದಿದೆ. ಇಲ್ಲಿರುವ ಗಿಡಗಳು ನೀರಿಲ್ಲದೆ ಒಣಗಿ ಹೋಗಿವೆ. ಕಲ್ಲು ಬೆಂಚುಗಳು ಮುರಿದು ಅನಾಥ ಸ್ಥಿತಿಯಲ್ಲಿದೆ. ನೀರು ಸಂಗ್ರಹಿಸಲು ಟ್ಯಾಂಕ್ ವ್ಯವಸ್ಥೆ ಇದ್ದು, ನೀರು ಪೂರೈಕೆಯೂ ಇದೆ. ಆದರೆ ಅದನ್ನು ಗಿಡಗಳಿಗೆ ಹಾಕಿ ಪಾರ್ಕನ್ನು ನಿರ್ವಹಣೆ ಮಾಡುವವರಿಲ್ಲದಂತಾಗಿದೆ. ಮೇಲ್ವಿಚಾರಣೆಗೆ ಇದ್ದ ಸಿಬ್ಬಂದಿಯನ್ನು ಪಾಲಿಕೆ ಬೇರೆ ಕಡೆಗೆ ನಿಯೋಜಿಸಿದೆ.

ಸ್ಮಾರ್ಟ್ ಆಗಿಲ್ಲ ಪಾರ್ಕ್: ಇಲ್ಲಿ ಗ್ರಂಥಾಲಯವಿರುವುದರಿಂದ ದಿನಂಪ್ರತಿ ನೂರಾರು ಜನ ಭೇಟಿ ನೀಡುತ್ತಾರೆ. ಆದರೆ ಸೊರಗಿರುವ ಉದ್ಯಾನ ಮನಸ್ಸಿಗೆ ಬೇಸರ ಉಂಟು ಮಾಡುತ್ತಿದೆ. ಸ್ಮಾರ್ಟ್ ಆಗುತ್ತಿರುವ ಮಂಗಳೂರಿಗೆ ಇದು ಕಪ್ಪು ಚುಕ್ಕೆ. ಈ ಪಾರ್ಕ್‌ಗೆ ಆವರಣ ಗೋಡೆಯೂ ಇಲ್ಲ. ಹಾಗಾಗಿ ಭಿಕ್ಷುಕರು, ಅಲೆಮಾರಿಗಳು ಬಂದು ಇಲ್ಲಿ ಮಲಗಿಕೊಂಡಿರುತ್ತಾರೆ. ಬೀದಿನಾಯಿಗಳಿಗೂ ಇದು ಆವಾಸ ಸ್ಥಾನ. ಮಲ್ಲಿಕಟ್ಟೆ ಪರಿಸರದಲ್ಲಿ ಯಾವುದೇ ಪಾರ್ಕ್ ಇಲ್ಲ. ಆದ್ದರಿಂದ ಈ ಪಾರ್ಕ್ ಸರಿಪಡಿಸಿ ಕಲ್ಲು ಬೆಂಚುಗಳನ್ನು ಜೋಡಿಸಿದರೆ ಹೆಚ್ಚಿನ ಮಂದಿ ಇಲ್ಲಿಗೆ ಬಂದು ಸಮಯ ಕಳೆಯಬಹುದು.

ಕದ್ರಿ ಪಾರ್ಕ್ ಹೊರತುಪಡಿಸಿದರೆ ಪುರಭವನದ ಎದುರಿನ ಗಾಂಧಿ ಪಾರ್ಕ್, ಬಾವುಟಗುಡ್ಡೆಯ ಟ್ಯಾಗೋರ್ ಪಾರ್ಕ್, ನೆಹರು ಮೈದಾನ ಬಳಿಯ ಪಾರ್ಕ್, ಮಣ್ಣಗುಡ್ಡೆ ಪಾರ್ಕ್ ಮೊದಲಾದವು ಪ್ರಮುಖವಾದುದು. ಕದ್ರಿ ಹಾಗೂ ಮಣ್ಣಗುಡ್ಡೆ ಉದ್ಯಾನವನ ಹೊರತುಪಡಿಸಿದರೆ ಉಳಿದಂತೆ ಹೆಚ್ಚಿನ ಪಾರ್ಕ್‌ಗಳು ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿ ಹೋಗಿವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲವೊಂದು ಯೋಜನೆಗಳಿಗೆ ದುಂದುವೆಚ್ಚ ಮಾಡುವುದಕ್ಕಿಂತ ಇಂಥ ಪಾರ್ಕ್‌ಗಳ ಅಭಿವೃದ್ಧಿಗೆ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಮಲ್ಲಿಕಟ್ಟೆ ಪಾರ್ಕ್ ಬದಿಯಲ್ಲೇ ಗ್ರಂಥಾಲಯ ಇದೆ. ರಾತ್ರಿ ವೇಳೆ ಗ್ರಂಥಾಲಯದ ಜಗಲಿಯಲ್ಲಿ ಮದ್ಯ, ಆಹಾರ ಸೇವನೆ ಮಾಡಿ ಹೋಗುತ್ತಾರೆ. ಕೆಲವೊಮ್ಮೆ ಇಲ್ಲಿಯೇ ಮೂತ್ರ ಕೂಡ ಮಾಡಿ ಹೋಗುತ್ತಿದ್ದಾರೆ. ಕೆಲವರು ಇಲ್ಲಿಯೇ ಮಲಗಿದರೆ ಬೆಳಗ್ಗೆ ನಾವು ಬಂದು ಎಬ್ಬಿಸುವ ಸ್ಥಿತಿ ಇದೆ.

ವೇದಾವತಿ ಗ್ರಂಥಪಾಲಕಿ, ಮಲ್ಲಿಕಟ್ಟೆ

ಮಂಗಳೂರು ನಗರದ ಪಾರ್ಕ್‌ಗಳನ್ನು ಪಾಲಿಕೆ ಅಭಿವೃದ್ಧಿ ಮಾಡಲಿದೆ. ಮಲ್ಲಿಕಟ್ಟೆಯಲ್ಲಿ ಸೊರಗಿದ ಪಾರ್ಕ್ ಗಮನಕ್ಕೆ ಬಂದಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲೂ ಯೋಜನೆಗಳಿವೆ. ಈ ಬಗ್ಗೆ ಆದ್ಯತೆ ನೀಡಲಾಗುವುದು.

ಪ್ರೇಮಾನಂದ ಶೆಟ್ಟಿ ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net