

ಕೊಳವಿ: ಸಮೀಪದ ಮಮದಾಪುರ ಗ್ರಾಮದ ಶ್ರೀ ಮೌನ ಮಲ್ಲಿಕಾರ್ಜುನ ಮಠದಲ್ಲಿ ನವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀದೇವಿ ಪ್ರವಚನ ಮಂಗಲೋತ್ಸವ ನಿಮಿತ್ತ ಶಿವಾನುಭವ ಹಾಗೂ ಧರ್ಮಸಭೆ ಜರುಗಿತು.
ಪ್ರವಚನಕಾರ ಮಂಜುನಾಥ ಮಾತನಾಡಿ, ಹಿಂದು-ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಶಿರಹಟ್ಟಿಯ ಕೀರ ಸಿದ್ದರಾಮ ಸ್ವಾಮೀಜಿ ಆಗಮನದಿಂದ ನಾವೆಲ್ಲರೂ ಪಾವನರಾಗಿದ್ದೇವೆ. ಜತೆಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಸಾಮಾಜಿಕ ಜಾಗೃತಿಗೆ ಶ್ರಮಿಸುತ್ತಿರುವ ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ಸೇವೆ ಅನುಕರಣೀಯ ಎಂದರು.
ಸುಮಂಗಲೆಯರ ಕುಂಭಮೇಳ ಹಾಗೂ ವಿವಿಧ ಸಂಗೀತ ವಾದ್ಯಗಳೊಂದಿಗೆ ಶಿರಹಟ್ಟಿಯ ಕೀರ ಸಿದ್ದರಾಮ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಾನಪದ ಗಾಯಕ ಗುರುರಾಜ ಹೊಸಕೋಟೆ, ಅಪ್ಪಟ ಗ್ರಾಮೀಣ ಜಾನಪದ ಸೊಗಡಿನ ಗೀತೆಗಳನ್ನು ಪ್ರಸ್ತುತಪಡಿಸಿದರು.
ಜಮಖಂಡಿ ಕಲ್ಯಾಣ ಮಠದ ಗೌರಿ ಶಂಕರ ಶಿವಾಚಾರ್ಯ ಸ್ವಾಮೀಜಿ, ಚುಳಕಿ ಮಠದ ಶೇಖರಯ್ಯ ಸ್ವಾಮೀಜಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.