

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಮಲ್ಲಿಕಾರ್ಜುನ ಮನಸೂರ ಜನ್ಮದಿನ ನಿಮಿತ್ತ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಇಲ್ಲಿನ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.
2024-25ನೇ ಸಾಲಿನ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿಯನ್ನು ಗಾಯಕ ಪಂ. ಡಿ. ಕುಮಾರ ದಾಸ್ ಹಾಗೂ ಯುವ ಪ್ರಶಸ್ತಿಯನ್ನು ವಿನಾಯಕ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಪ್ರಶಸ್ತಿಯು 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಯುವ ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.
ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಮಲ್ಲಿಕಾರ್ಜುನ ಮನಸೂರ ಸಂಗೀತ ಲೋಕದ ದಿಗ್ಗಜರು. ಜಗತ್ತಿನಲ್ಲಿ ಜೀವನಕ್ಕೆ ದಿವ್ಯ ಔಷಧ ಸಂಗೀತ. ಇಂತಹ ಸಂಗೀತವನ್ನು ಸುಮಾರು 6 ದಶಕಗಳ ಕಾಲ ಇಡೀ ದೇಶಕ್ಕೆ ಉಣ ಬಡಿಸಿದವರು ಮನಸೂರರು. ಮನಸೂರರನ್ನು ಸ್ಮರಿಸುವುದೆಂದರೆ ಭಾರತೀಯ ಸಂಗೀತ ಪರಂಪರೆ ಗೌರವಿಸಿದಂತೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಧಾರವಾಡದಲ್ಲಿ ಸಂಗೀತಕ್ಕೆ ಸಂಬಂಧಿಸಿದ 6 ಟ್ರಸ್ಟ್ಗಳು ಕಾರ್ಯನಿರ್ವಹಿಸುತ್ತಿವೆ. ಸಂಗೀತ, ಕಲೆ ಉಳಿಸಿ ಬೆಳೆಸಲು ಹಲವರು ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ ಬಳಕೆಯಲ್ಲಿ ತಲ್ಲೀನರಾಗಿರುವ ಯುವಕರು ಸಂಗೀತ ಕಲಿಯಲ್ಲಿ ಆಸಕ್ತಿ ವಹಿಸುವ ಮೂಲಕ ಸಂಗೀತವನ್ನು ಬೆಳೆಸುವ ಕೆಲಸ ಮಾಡಲಿ ಎಂದರು.
ಹುಡಾ ಅಧ್ಯಕ್ಷ ಶಾಕೀರ ಸನದಿ, ಟ್ರಸ್ಟ್ ಸದಸ್ಯರಾದ ಪಂ.ಎಂ. ವೆಂಕಟೇಶಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ, ಡಾ. ದಿಲೀಪ ದೇಶಪಾಂಡೆ, ನೀಲಮ್ಮ ಕೊಡ್ಲಿ, ಇತರರು ಇದ್ದರು.
ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಾರಾಮನ್ ನಿರೂಪಿಸಿದರು. ನಂತರ ವಿನಾಯಕ ಹೆಗಡೆ, ಪಂ. ಡಿ ಕುಮಾರ ದಾಸ್ ಗಾಯನ ಪ್ರಸ್ತುತಪಡಿಸಿದರು.